ಡಿ.೨೧ಕ್ಕೆ ವಿಶ್ವದರ್ಶನ ಸಂಭ್ರಮ
- Ananthamurthy m Hegde
- Dec 20, 2024
- 1 min read
ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಮೂಹದ ವಿಶ್ವದರ್ಶನ ಸಂಭ್ರಮ-2024 ಕಾರ್ಯಕ್ರಮ ಡಿ.21 ರಂದು ಸಂಭ್ರಮದಿಂದ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10 ಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ಕೈಬರಹ ಪತ್ರಿಕೆಯನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅನಾವರಣಗೊಳಿಸಲಿದ್ದಾರೆ. ಮಾಜಿ ಶಾಸಕ ವಿ.ಎಸ್.ಪಾಟೀಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಸಂಜೆ 4 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಹಸೀಲ್ದಾರ ಯಲ್ಲಪ್ಪ ಗೊನ್ನೆಣ್ಣವರ್ ಉದ್ಘಾಟಿಸಲಿದ್ದು, ಡಿಸಿಎಫ್ ಹರ್ಷ ಭಾನು ಭಾಗವಹಿಸಲಿದ್ದಾರೆ. ಸಂಜೆ 6 ಕ್ಕೆ ವಿಶ್ವದರ್ಶನ ಪುರಸ್ಕಾರ ಸಮಾರಂಭ ನಡೆಯಲಿದ್ದು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ನ ನ್ಯಾಯವಾದಿ ನಾರಾಯಣ ಯಾಜಿ ಆಶಯ ನುಡಿಗಳನ್ನಾಡಲಿದ್ದಾರೆ. ಸಾಗರದ ಸಹಕಾರಿ ರತ್ನ ಹರನಾಥರಾವ್ ಮತ್ತಿಕೊಪ್ಪ ಅವರಿಗೆ ವಿಶ್ವದರ್ಶನ ಪುರಸ್ಕಾರ ನೀಡಿ ಗೌರವಿಸಲಾಗುವುದು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಲಾ ಪರಿಸರಕ್ಕೆ ಪೂರಕವಾದ ಸ್ಟಾಲ್ ಗಳಿಗೂ ಸಂಸ್ಥೆಯ ಆವಾರದಲ್ಲಿ ಅವಕಾಶ ನೀಡಲಿದ್ದೇವೆ ಎಂದರು.
ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ನ ಪತ್ರಿಕೋದ್ಯಮದ ಮೊದಲ ಬ್ಯಾಚ್ ನ ಕೋರ್ಸ್ ಮುಕ್ತಾಯಗೊಂಡಿದೆ. ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ದೊರಕಿದೆ. ವೃತ್ತಿಪರ ಪತ್ರಕರ್ತರಾಗಿ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಅವರು ಉದ್ಯೋಗಿಗಳಾಗಿದ್ದಾರೆ. ಬಿಸಿಎ ಎರಡನೇ ವರ್ಷದ ತರಗತಿಗಳು ಆರಂಭವಾಗಿದೆ. ಈ ಕೋರ್ಸ್ ಮುಗಿಯುವ ಹೊತ್ತಿಗೆ ಎಂ.ಸಿ.ಎ ಸಹ ಆರಂಭವಾಗಲಿದೆ ಎಂದರು.
ಸಂಸ್ಥೆಯ ಸಿಬಿಎಸ್ ಸಿ ವಿಭಾಗ ಸಂಪೂರ್ಣವಾಗಿ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆಗೊಳ್ಳಲಿದೆ. ದೊಡ್ಡ ನಗರಗಳಲ್ಲಿ ದೊರಕುವ ತಂತ್ರಜ್ಞಾನಯುತ ಶಿಕ್ಷಣ ಯಲ್ಲಾಪುರದಲ್ಲೂ ದೊರೆಯಬೇಕೆಂಬ ಉದ್ದೇಶ ನಮ್ಮದು. ಮುಂದಿನ ಜೂನ್ ತಿಂಗಳಲ್ಲಿ ಬಿಎ ಮತ್ತು ಬಿ ಎಸ್.ಸಿ ಕೋರ್ಸ್ ಗಳು ಹೊಸದಾಗಿ ಆರಂಭವಾಗಲಿವೆ. ಇಂಗ್ಲಿಷ್ ಮುಖ್ಯ ವಿಷಯವಾಗಿ ಈ ಪದವಿ ತರಗತಿಗಳು ನಡೆಯಲಿದ್ದು, ಅದರ ಜೊತೆಗೆ ಕೇಂದ್ರೀಯ ಸೇವೆಗಳು, ಬ್ಯಾಂಕಿಂಗ್ ಹಾಗೂ ರಾಜ್ಯ ಆಡಳಿತ ಸೇವೆಗಳು ಸೇರಿ 11 ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ರಾಜ್ಯದಲ್ಲೇ ಮೊದಲ ಹಾಗೂ ವಿನೂತನ ಪ್ರಯೋಗ ಇದಾಗಿದೆ. ರಾಜ್ಯದ ಉದ್ದಗಲದಿಂದ ಇದಕ್ಕೆ ಬೇಡಿಕೆ ಬರಲಿದೆ ಎಂಬ ವಿಶ್ವಾಸವಿದೆ.
ಉತ್ತಮ ಗ್ರಂಥಾಲಯವನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಎಲ್ಲಾ ಓದುಗರಿಗೆ ಇದು ಅನುಕೂಲವಾಗಬೇಕೆಂಬ ಉದ್ದೇಶವಿದೆ. ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಕೋರ್ಸ್ ಗಳಿಗೆ ಮಹತ್ವ ನೀಡಿ ಮುಂದುವರಿಯುವ ಯೋಜನೆ ನಮ್ಮದು. ಉತ್ತಮ ಶಿಕ್ಷಕರ ತಂಡದಿಂದ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತ ಯಶಸ್ವಿಯಾಗಿ ಸಾಗಲು ಕಾರಣವಾಗಿದೆ ಎಂದರು. ಸಂಸ್ಥೆಯ ಸಿಇಒ ಅಜಯ ಭಾರತೀಯ ಇದ್ದರು.












Comments