ಡಿ.೨೩ಕ್ಕೆ ಮಂಚಿಕೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
- Ananthamurthy m Hegde
- Dec 20, 2024
- 1 min read
ಯಲ್ಲಾಪುರ: ತಾಲೂಕಿನ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.23 ರಂದು ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ರಂಗ ಮಂದಿರಲ್ಲಿ ನಡೆಯಲಿದೆ ಎಂದು ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಡಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನ ರಾಷ್ಟ್ರಧ್ವಜ, ನಾಡಧ್ವಜಾರೋಹಣ, ಅಧ್ಯಕ್ಷರ ಮೆರವಣಿಗೆಯೊಂದಿಗೆ ಆರಂಭವಾಗಲಿದೆ. ಹಿರಿಯ ಸಾಹಿತಿ ಶ್ಯಾಮಸುಂದರ ಬಿದ್ರಕುಂದಿ ಉದ್ಘಾಟಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರು ವನರಾಗ ಶರ್ಮಾ ಅವರ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಪುಸ್ತಕ ಮಳಿಗೆಯನ್ನು, ಎಂ.ಎಲ್.ಸಿ ಶಾಂತಾರಾಮ ಸಿದ್ದಿ ದ್ವಾರಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.
ಮಧ್ಯಾಹ್ನ 2ಕ್ಕೆ ಕವಿ ಸುಬ್ರಾಯ ಬಿದ್ರೆಮನೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, 3.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿ ನಡೆಯಲಿದೆ. ನಂತರ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಗೋಷ್ಠಿ ನಡೆಯಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪರಿಸರ ತಜ್ಞ ಶಿವಾನಂದ ಕಳವೆ ಸಮಾರೋಪ ನುಡಿಗಳನ್ನಾಡಲಿದ್ದಾರೆ. ವಿವಿಧ ಕ್ಷೇತ್ರಗಳ 8 ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಗಭೂಷಣ ಹೆಗಡೆ ಅವರ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗೌರವ ಕಾರ್ಯದರ್ಶಿಗಳಾದ ಸಂಜೀವಕುಮಾರ ಹೊಸ್ಕೇರಿ, ಜಿ.ಎನ್.ಭಟ್ಟ ತಟ್ಟಿಗದ್ದೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ವಿ.ಕೋಮಾರ ಇದ್ದರು.












Comments