ದರ್ಶನ್ ತೂಗುದೀಪ್ ಮಧ್ಯಂತರ ಜಾಮೀನು ಮುಕ್ತಾಯ ಯಾವಾಗ ?
- Ananthamurthy m Hegde
- Dec 11, 2024
- 1 min read
ಬೆಂಗಳೂರು: ಕೊಲೆ ಪ್ರಕರಣ ಆರೋಪ ಎದುರಿಸುತ್ತಿರುವ ನಟ ದರ್ಶನ್‌ಗೆ ಬುಧವಾರ ಮಹತ್ವದ ದಿನವಾಗಿದೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನಟ ಬೆನ್ನುನೋವಿನ ಹಿನ್ನೆಲೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಮಧ್ಯಂತರ ಜಾಮೀನನ್ನು ವಿಸ್ತರಣೆ ಮಾಡಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ವೈದ್ಯಕೀಯ ವರದಿಯಲ್ಲಿ ನಟ ದರ್ಶನ್ ಬುಧವಾರ ಅಪರೇಷನ್ ಮಾಡಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ನಟ ದರ್ಶನ್ ಹಲವು ವರ್ಷಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದರು. ಈ ಹಿಂದೆಯೂ ಒಮ್ಮೆ ಶಸ್ತ್ರಚಿಕಿತ್ಸೆ ಒಳಾಗಾಗಿ, ಹಲವು ಬಾರಿ ಚಿಕಿತ್ಸೆ ಪಡೆದಿದ್ದರು. ಕೊಲೆ ಕೇಸ್‌ನಲ್ಲಿ ಬಂಧನವಾದ ಬಳಿಕ ನಟ ಡಯಟ್, ಇತರೆ ಆರೈಕೆಗಳು ವ್ಯತ್ಯಯವಾದ ಹಿನ್ನೆಲೆ ಬೆನ್ನುನೋವು ಹೆಚ್ಚಳವಾಗಿತ್ತು. ವಿವಿಧ ಸ್ಕ್ಯಾನ್‌ಗಳನ್ನು ನಡೆಸಿದ್ದ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದರು. ಹೀಗಾಗಿಯೇ, ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಈ ಮಧ್ಯೆ, ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ಆರ್. ನಾಗರಾಜು, ಎಂ. ಲಕ್ಷ್ಮಣ್, ಅನುಕುಮಾರ್, ಜಗದೀಶ್, ಪ್ರದೋಶ್ ಎಸ್.ರಾವ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಕಳೆದ ಸೋಮವಾರ ನಡೆಸಿತ್ತು. ಸುದೀರ್ಘ ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು. ತೀರ್ಪು ಹೊರಬೀಳುವವರೆಗೆ ದರ್ಶನ್‌ಗೆ ಮಂಜೂರು ಮಾಡಿರುವ ಮಧ್ಯಂತರ ಜಾಮೀನನ್ನು ವಿಸ್ತರಣೆ ಮಾಡಿತ್ತು.
ವೈದ್ಯಕೀಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಆಧರಿಸಿ ವೈದ್ಯರು ತೀರ್ಮಾನಿಸುತ್ತಾರೆ. ಡಿ.5 ರಂದು ಮತ್ತೊಂದು ಸರ್ಟಿಫಿಕೇಟ್ ನೀಡಿದ್ದಾರೆ. ಸರ್ಜರಿಗೆ ಮುಂಚಿತವಾಗಿ ದರ್ಶನ್‌ಗೆ ನೀಡಬೇಕಾದ ಚಿಕಿತ್ಸೆ ನೀಡಲಾಗುತ್ತಿದ್ದು, ಡಿ.11ಕ್ಕೆ ಸರ್ಜರಿ ಮಾಡಲಾಗುತ್ತದೆ. ದರ್ಶನ್ ಮಧ್ಯಂತರ ಜಾಮೀನಿನ ಯಾವುದೇ ಷರತ್ತು ಉಲ್ಲಂಘಿಸಿಲ್ಲ. ದೈಹಿಕವಾಗಿ ಸಕ್ಷಮರಾದಾಗ ಮಾತ್ರ ಸರ್ಜರಿ ಮಾಡಲು ಸಾಧ್ಯ ಎಂದು ಹೇಳಿದ್ದರು.
Comments