top of page

ನೂತನ ಆಡಳಿತ ಸೌಧದ ಸ್ವಚ್ಛತಾ ಕಾರ್ಯ ಮಾಡಿದ ತಹಸೀಲ್ದಾರ್ ಅಶೋಕ್ ಭಟ್

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read

ಕಾರವಾರ: ನೂತನವಾಗಿ ನಿರ್ಮಿಸಿದ ಆಡಳಿತ ಸೌಧದಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಕಸ ಗುಡಿಸುವವರು ಇಲ್ಲ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಅಶೋಕ ಭಟ್ಟ ಹಾಗೂ ತಾಲೂಕಾ ದಂಡಾಧಿಕಾರಿ ಸತೀಶ್ ಗೌಡ ಸೇರಿ ಸಿಬ್ಬಂದಿ ಜೊತೆ ಕಚೇರಿಯ ಕಸ ಗುಡಿಸಿದರು.

ತಾಲೂಕಾ ಆಡಳಿತ ಸೌಧದಲ್ಲಿ ಮೂರು ಮಹಡಿಗಳಿದ್ದು ಕಂದಾಯ, ಭೂ ಮಾಪನಾ, ಮುದ್ರಾಂಕ, ಭೂ ಸ್ವಾಧೀನದ ಜೊತೆ ಸಹಾಯಕ ಆಯುಕ್ತರ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಎಲ್ಲಾ ಕಚೇರಿಗಳಲ್ಲಿಯೂ ಡಿ ದರ್ಜೆಯ ನೌಕರರು ಅಗತ್ಯಕ್ಕೆ ತಕ್ಕಂತೆ ಇಲ್ಲ. ಹೀಗಾಗಿ ಕಚೇರಿ ಕಸ ಗುಡಿಸುವುದು ಇಲ್ಲಿ ನಿತ್ಯದ ಸಮಸ್ಯೆ.

ಕಟ್ಟಡ ಉದ್ಘಾಟನೆ ಆದ ನಂತರ ಈವರೆಗೆ ಒಮ್ಮೆಯೂ ಪೂರ್ತಿ ಕಟ್ಟಡ ಸ್ವಚ್ಚತಾ ಕಾರ್ಯ ನಡೆದಿರಲಿಲ್ಲ. ಕಟ್ಟಡ ನಿರ್ವಹಣಾ ಸಮಿತಿ ಸಹ ರಚನೆ ಆಗದ ಪರಿಣಾಮ ಕಟ್ಟಡ ಸ್ವಚ್ಛತೆಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಆಡಳಿತ ಸೌಧದ ಹಿಂದಿನ ವಾಹನ ನಿಲುಗಡೆ ಪ್ರದೇಶದಿಂದ ಹಿಡಿದು ಮೂರನೇ ಮಹಡಿಯವರೆಗೆ ಈವರೆಗೂ ಎಲ್ಲೆಂದರಲ್ಲಿ ತ್ಯಾಜ್ಯ ಸಿಗುತ್ತಿದ್ದವು.

ಈ ಹಿನ್ನಲೆ ಆಡಳಿತ ಸೌಧ ಗೆಬ್ಬೆದ್ದಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು. ಶಾಸಕರು ಸಹ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಸ್ವಚ್ಛತೆ ಬಗ್ಗೆ ಅರಿವು ಹೊಂದಿದ ಅಧಿಕಾರಿಗಳು `ನಮ್ಮ ಕಚೇರಿ – ನಮ್ಮ ಹೆಮ್ಮೆ’ ಎಂಬ ಅಭಿಯಾನಕ್ಕೆ ಸಿದ್ಧತೆ ನಡೆಸಿದರು. ಅದರ ಪರಿಣಾಮವಾಗಿ ಅಧಿಕಾರಿ-ಸಿಬ್ಬಂದಿ ಎಲ್ಲರೂ ಸೇರಿ ಭಾನುವಾರದ ರಜಾ ದಿನ ಎರಡು ತಾಸು ಕಟ್ಟಡ ಸ್ವಚ್ಛತೆಯ ಬಗ್ಗೆ ಮಾತನಾಡಿದರು.

ಸ್ವಚ್ಛತೆಗಾಗಿ ಎರಡು ತಂಡ ರಚನೆ ಮಾಡಲಾಗಿದ್ದು, ಕುಮಟಾ ತಹಶೀಲ್ದಾರ್ ಜೊತೆಗಿನ ತಂಡದವರು ನೆಲ ಮಹಡಿ ಹಾಗೂ ಕಟ್ಟಡದ ಸುತ್ತಲು ಸ್ವಚ್ಛ ಮಾಡಿದರು. ಅಶೋಕ ಭಟ್ಟ ಅವರ ತಂಡದವರು ಎರಡು ಹಾಗೂ ಮೂರನೇ ಮಹಡಿ ಸ್ವಚ್ಛಗೊಳಿಸಿದರು. ಸ್ವತಃ ಎರಡು ತಹಶೀಲ್ದಾರರು ಪೊರಕೆ ಹಿಡಿದು ಕಸ ಗುಡಿಸಿದ್ದು, ಇದರಿಂದ ಪ್ರೇರಣೆಗೊಂಡ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ ಜೊತೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಎರಡು ತಾಸಿನ ಅವಧಿಯಲ್ಲಿ ಕಟ್ಟಡದ ಅಡಿಯಿಂದ ಮುಡಿಯವರೆಗೂ ಸ್ವಚ್ಛಗೊಳಿಸಿದರು. ಶ್ರಮದಾನ ಮುಗಿದ ನಂತರ ಎಲ್ಲರೂ ಸೇರಿ ಫೋಟೋ ಕ್ಲಿಕ್ಕಿಸಿಕೊಂಡರು.

תגובות


Top Stories

bottom of page