top of page

ನೀರು ಸೇವಿಸಿ ಸಾರ್ವಜನಿಕರು ಅಸ್ವಸ್ಥ

  • Writer: Ananthamurthy m Hegde
    Ananthamurthy m Hegde
  • Jan 13
  • 1 min read

ಯಲ್ಲಾಪುರ: ತಾಲೂಕಿನ ಹುಣಶೆಟ್ಟಿಕೊಪ್ಪ ಆಯುಷ್ಮಾನ್ ಆರೋಗ್ಯ ಮಂದಿರ ವ್ಯಾಪ್ತಿಯ ಡೋಮಗೇರಿ ಗೌಳಿವಾಡ ಪ್ರದೇಶದ ಓವರಹೆಡ್ ಟ್ಯಾಂಕಿನಿಂದ ಸರಬರಾಜು ಮಾಡಿದ ನೀರಿನಲ್ಲಿ ವಾಸನೆ ಇದ್ದು, ಭಾನುವಾರ ನೀರು ಸೇವಿಸಿದ ಕೆಲವು ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆತಂಕ ಮೂಡಿಸಿತು.


ವಿಷಯ ತಿಳಿದು ಆರೋಗ್ಯ ಇಲಾಖೆಯ ಸಿಬ್ಬಂದಿ ಭವ್ಯಾ ದೇವಾಡಿಗ, ಸಮುದಾಯ ಆರೋಗ್ಯ ಅಧಿಕಾರಿ ಶ್ರದ್ಧಾ ಭಗತ, ಆರೋಗ್ಯ ನೀರಿಕ್ಷಣಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿದರು. ನಂತರ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿ ನಲವತ್ತೈದು ಜನರಿಗೆ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಲಾಯಿತು. ಅವಶ್ಯಕತೆ ಅನಿಸಿದ ಎಂಟು ಜನರಿಗೆ ತಾಲೂಕಾ ಆಸ್ಪತ್ರೆ ಯಲ್ಲಾಪುರಕ್ಕೆ ಮುಂದಿನ ಚಿಕಿತ್ಸೆಗಾಗಿ ಕಳುಹಿಸಿದರು.

ಪಿಡಿಒ ಅಣ್ಣಪ್ಪ ವಡ್ಡರ ಹಾಗೂ ಗ್ರಾಮ ಪಂಚಾಯತ ಸದಸ್ಯರು ಮತ್ತು ಸಿಬ್ಬಂದಿಯೊಂದಿಗೆ ಓವರಹೆಡ್ ಟ್ಯಾಂಕ ನೀರು ಪರಿಶೀಲಿಸಿದಾಗ ನೀರಿನಲ್ಲಿ ಹಾವು ಸತ್ತು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ನೀರು ಖಾಲಿ ಮಾಡಿಸಿ, ಟ್ಯಾಂಕ್ ಶುಚಿಗೊಳಿಸಿ ಹೊಸ ನೀರು ಸರಬರಾಜು ಮಾಡಲು ವ್ಯವಸ್ಥೆ ಕಲ್ಪಿಸಲಾಯಿತು.

ಇದೇ ವೇಳೆ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಕಲುಷಿತ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನು ಸೇವಿಸುವಂತೆ ತಿಳಿಸಲಾಯಿತು. ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ತಿಳಿಸಲಾಯಿತು.

Comments


Top Stories

bottom of page