top of page

ನೆಲಮಂಗಲ ಭೀಕರ ಅಪಘಾತ : ಕಾರಣ ಬಿಚ್ಚಿಟ್ಟ ಕಂಟೈನರ್ ಚಾಲಕ

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read
ree

ಬೆಂಗಳೂರು: ನೆಲಮಂಗಲದಲ್ಲಿ ಆರು ಜನರ ಸಾವಿಗೆ ಕಾರಣವಾದ ಭೀಕರ ಅಪಘಾತದಲ್ಲಿ ಭಾಗಿಯಾಗಿದ್ದ ಕಂಟೈನರ್ ಚಾಲಕ ಸೋಮವಾರ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ವಾಹನದ ಮುಂದಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸ್ಟೀರಿಂಗ್ ಅನ್ನು ರಸ್ತೆ ವಿಭಜಕದ ಕಡೆಗೆ ತಿರುಗಿಸಿದ್ದೇ ಅಪಘಾತಕ್ಕೆ ಕಾರಣ ಎಂದಿದ್ದಾರೆ.

ಆದಾಗ್ಯೂ, ಪೊಲೀಸರು ತನಿಖೆಯ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದು, ಮಾಹಿತಿ ಸೋರಿಕೆಯು ತನಿಖೆಗೆ ಅಡ್ಡಿಯಾಗುತ್ತದೆ ಎಂದಿದ್ದಾರೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಅಪಘಾತದ ಹಿಂದಿನ ನಿಖರ ಕಾರಣವನ್ನು ಕಂಡುಹಿಡಿಯಲು ವಿಸ್ತೃತ ತನಿಖೆ ನಡೆಸಲಾಗುತ್ತಿದೆ. ತನಿಖೆಯ ಭಾಗವಾಗಿ ಅಪಘಾತ ನಡೆದ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಿವೈಎಸ್ಪಿ ಶ್ರೇಣಿಯ ಅಧಿಕಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ರಸ್ತೆ ಸುರಕ್ಷತಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಸ್ ಸ್ಟಡಿ ಕೂಡ ಮಾಡುತ್ತಿದ್ದೇವೆ. ಈ ಹಂತದಲ್ಲಿ, ತನಿಖೆಗೆ ಅಡ್ಡಿಯುಂಟುಮಾಡುವ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ನಾವು ಬಯಸುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಜಾರ್ಖಂಡ್ ಮೂಲದ ಕಂಟೈನರ್ ಚಾಲಕ ಆರಿಫ್ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ಟ್ರಕ್‌ನ ಮುಂದೆ ಕಾರಿತ್ತು ಮತ್ತು ತಾನು ಗಂಟೆಗೆ 40 ಕಿಮೀ ವೇಗದಲ್ಲಿ ಹೋಗುತ್ತಿದ್ದೆ. ಮುಂದೆ ಹೋಗುತ್ತಿದ್ದ ಕಾರು ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಕಂಟೈನರ್ ನಿಯಂತ್ರಣ ತಪ್ಪಿತು ಎಂದಿದ್ದಾರೆ.

ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ನಾನು ಸ್ಟೀರಿಂಗ್ ಅನ್ನು ಬಲಭಾಗದಲ್ಲಿರುವ ರಸ್ತೆ ವಿಭಜಕದ ಕಡೆಗೆ ತಿರುಗಿಸಿದೆ. ಆದರೆ, ನಂತರ ನಾನು ಇನ್ನೊಂದು ಕಾರನ್ನು ನೋಡಿದೆ. ಕೂಡಲೇ ಮತ್ತೆ ಎಡಕ್ಕೆ ತಿರುಗಿಸಿದೆ. ಇದರಿಂದಾಗಿ ಸ್ಟೀಲ್ ತುಂಬಿದ್ದ ಕಂಟೈನರ್ ಬಿದ್ದಿದೆ ಎಂದು ಅವರು ತಿಳಿಸಿದರು.

ಕಂಟೈನರ್ ಚಾಲಕನಿಗೆ ತಮ್ಮ ವಾಹನದ ಕೆಳಗೆ ಎಸ್‌ಯುವಿ ಕಾರು ಸಿಲುಕಿ ನಜ್ಜುಗುಜ್ಜಾಗಿದೆ ಮತ್ತು ಇದು ಒಂದೇ ಕುಟುಂಬದ ಆರು ಮಂದಿಯ ಸಾವಿಗೆ ಕಾರಣವಾಗಿದೆ ಎಂಬುದು ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶನಿವಾರ ಬೆಂಗಳೂರು ಹೊರವಲಯದ ನೆಲಮಂಗಲದ ತಾಳೆಕೆರೆ ಬಳಿಯಲ್ಲಿ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಕುಟುಂಬ ವಿಜಯಪುರಕ್ಕೆ ತೆರಳುತ್ತಿತ್ತು.

Comments


Top Stories

bottom of page