ಪರ್ತ್ ಟೆಸ್ಟ್ನಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ
- Ananthamurthy m Hegde
- Nov 19, 2024
- 1 min read

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯ ಪರ್ತ್ನಲ್ಲಿ ಇದೇ ೨೨ ರಿಂದ ಆರಂಭವಾಗಲಿದೆ. ಈ ಟೆಸ್ಟ್ಗೆ ಉಭಯ ತಂಡಗಳು ಭರದ ಸಿದ್ಧತೆ ನಡೆಸಿವೆ. ಭಾರತ ತಂಡ ಸಹ ಭರ್ಜರಿ ಅಭ್ಯಾಸವನ್ನು ಆರಂಭಿಸಿದೆ. ಈ ಸರಣಿಯಲ್ಲಿ ಗೆಲುವನ್ನು ಸಾಧಿಸುವ ಟೀಮ್ ಇಂಡಿಯಾದ ಕನಸು ಸಫಲವಾಗುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಇದಕ್ಕೆ ಕಾರಣ ಭಾರತದ ಆಟಗಾರರು ಗಾಯಕ್ಕೆ ತುತ್ತಾಗಿರುವುದು. ಪ್ರವಾಸಿ ತಂಡಕ್ಕೆ ಗಾಯ ಬಹುವಾಗಿ ಕಾಡುತ್ತಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೌಟುಂಬಿಕ ಕಾರಣಗಳಿಂದ ಇನ್ನು ಆಸೀಸ್ ಪ್ರವಾಸವನ್ನು ಕೈಗೊಂಡಿಲ್ಲ. ಇವರ ಅನುಪಸ್ಥಿತಿಯಲ್ಲಿ ಜಸ್‌ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದ ಆಟಗಾರ ಶುಭಮನ್ ಗಿಲ್ ಹೆಬ್ಬರೆಳಿಗೆ ಪೆಟ್ಟು ಮಾಡಿಕೊಂಡ ಕಾರಣ ಮೊದಲ ಟೆಸ್ಟ್ನಿಂದ ದೂರ ಉಳಿಯಲಿದ್ದಾರೆ. ಈ ಇಬ್ಬರ ಸ್ಥಾನವನ್ನು ಯಾರು ತುಂಬಲಿದ್ದಾರೆ. ಈ ಪ್ರಶ್ನೆ ಸದ್ಯ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದೆ. ಸಿಕ್ಕ ಮಾಹಿತಿಯ ಪ್ರಕಾರ ಕರ್ನಾಟಕದ ಇಬ್ಬರು ಆಟಗಾರರು ಈ ಸ್ಥಾನವನ್ನು ತುಂಬಲು ಸಿದ್ಧರಾಗಿದ್ದಾರೆ.
ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಹಾಗೂ ಆಸ್ಟ್ರೇಲಿಯಾ ಎ ವಿರುದ್ಧ ಅನಧಿಕೃತ ಟೆಸ್ಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ದೇವದತ್ ಪಡಿಕ್ಕಲ್ ಅವರಿಗೆ ಮೊದಲ ಸ್ಥಾನ ಲಭಿಸುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕೆಎಲ್ ರಾಹುಲ್ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಅಲ್ಲದೆ ಇವರು ಆರಂಭಿಕರಾಗಿ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಪ್ರಶ್ನೆ ಬಹುದಿನಗಳಿಂದ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದರಿಂದ ಈ ಸ್ಥಾನ ಸಹ ಖಾಲಿ ಇದೆ. ಈ ಸ್ಥಾನದಲ್ಲಿ ಇನ್ನೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಆಡುವ ಸಾಧ್ಯತೆ ಇದೆ.
ಇವರು ಈಗಾಗಲೇ ಭಾರತದಲ್ಲಿ ನಡೆದಿದ್ದ ಇಂಗ್ಲೆAಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು. ಆದರೆ ಇವರ ಮೇಲೆ ಆಯ್ಕೆ ಸಮಿತಿ ಇಟ್ಟಿದ್ದ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇತ್ತೀಚಿಗೆ ಭಾರತ ಎ ತಂಡದ ಪರ ಆಸ್ಟ್ರೇಲಿಯಾ ಎ ವಿರುದ್ಧ ಅನಧಿಕೃತ ಟೆಸ್ಟ್ನಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರನ್ನು ಆಸ್ಟ್ರೇಲಿಯಾದಲ್ಲಿ ಉಳಿಯುವಂತೆ ಸೂಚಿಸಲಾಗಿತ್ತು.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಐದು ಪಂದ್ಯಗಳು ನಡೆಯಲಿವೆ. ಈ ಸರಣಿಯ ಎರಡನೇ ಪಂದ್ಯದ ವೇಳೆ ಶುಭಮನ್ ಗಿಲ್ ಫಿಟ್ ಆಗಲಿದ್ದಾರೆ ಎಂದು ತಿಳಿದು ಬರುತ್ತಿದೆ.















Comments