top of page

ಬೆಂಗ್ರೆಯಲ್ಲಿ ಜನಸ್ಪಂದನೆ ಸಭೆ ಯಶಸ್ವಿ: ಹಲವು ಸಮಸ್ಯೆಗಳ ಕುರಿತು ಚರ್ಚೆ

  • Writer: Ananthamurthy m Hegde
    Ananthamurthy m Hegde
  • Dec 21, 2024
  • 1 min read

ಭಟ್ಕಳ: ತಾಲೂಕಿನ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗ್ರೆಯಲ್ಲಿ ನಡೆದ ಜನಸ್ಪಂದನೆ ಸಭೆಗೆ ನೂರಾರು ಸಂಖ್ಯೆಯ ಸಾರ್ವಜನಿಕರು ಆಗಮಿಸಿ ತಮ್ಮ ಅಹವಾಲು ಸಲ್ಲಿಸಿ, ಕೆಲವರು ಸ್ಥಳದಲ್ಲೇ ಪರಿಹಾರ ಪಡೆದುಕೊಂಡರೆ, ಇನ್ನು ಹಲವರು ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವ ಭರವಸೆ ಪಡೆದುಕೊಂಡರು.

ಸಚಿವ ಮಂಕಾಳ ಎಸ್. ವೈದ್ಯ ಅಧ್ಯಕ್ಷತೆಯಲ್ಲಿ ಬೆಂಗ್ರೆಯ ದೇವಾಡಿಗ ಸಭಾಭವನದಲ್ಲಿ ಜನ ಸ್ಪಂದನಾ ಸಭೆ ನಡೆಯಿತು. ಬೆಂಗ್ರೆ ಗ್ರಾಪಂ ಸದಸ್ಯ ವಿಷ್ಣು ದೇವಾಡಿಗ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಜನರ ಬದುಕನ್ನು ಹೈರಾಣಾಗಿಸಿದೆ. ರಸ್ತೆಯ ಪಕ್ಕದಲ್ಲಿ ಚರಂಡಿ ಇಲ್ಲದೆ ನೀರು ಕೃಷಿ ಭೂಮಿಗೆ ನುಗ್ಗಿ ಬಂದ ಫಸಲು ನಾಶವಾಗಿದೆ. ಹೆದ್ದಾರಿ ಇಲಾಖೆ ಈ ಕುರಿತು ಸ್ಪಂದನೆ ನೀಡುತ್ತಿಲ್ಲ. ಅತಿಯಾದ ಮಳೆ ಸುರಿದರೆ ಹೆದ್ದಾರಿಯಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ದ್ವಿಚಕ್ರ ಸವಾರರು ಮಾತ್ರವಲ್ಲದೆ ಎಲ್ಲಾ ವಾಹನ ಸವಾರರು ನೀರಿನಲ್ಲಿ ತೇಲಿ ವಾಹನ ಅಪಘಾತಗಳು ಹೆಚ್ಚುತ್ತಿವೆ. ಇದಕ್ಕೊಂದು ಅಂತ್ಯ ಹಾಡದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಬೆಂಗ್ರೆಯ ಸಣ್ಣಹೊಳೆ, ದೊಡ್ಡಹೊಳೆಯಲ್ಲೂ ಹೂಳು ತುಂಬಿಕೊಂಡಿದೆ. ಇದರಿಂದ ಉಪ್ಪು ನೀರು ಸರಾಗವಾಗಿ ಹರಿದು ಬಂದು ಕೃಷಿ ಭೂಮಿ ಹಾಳಾಗುತ್ತಿದೆ. ಹೂಳು ತೆಗೆಯುವ ಕಾರ್ಯ ಹಾಗೂ ನದಿಗೆ ದಂಡು ಕಟ್ಟುವ ಕಾರ್ಯವಾಗಬೇಕು ಎಂದು ಸಚಿವರ ಬಳಿ ತಮ್ಮ ಗ್ರಾಮಸ್ಥರ ಪರವಾಗಿ ಅಹವಾಲು ಸಲ್ಲಿಸಿದರು.

ಹಿರಿಯ ಮುಖಂಡ ವೆಂಕಟಯ್ಯ ಭೈರುಮನೆ ಹೆದ್ದಾರಿಯ ಸಮಸ್ಯೆಯ ಕುರಿತು ಪ್ರಸ್ತಾಪಿಸಿದರು. ಬಳಿಕ ಅಲ್ಲಿ ನೆರೆದ ನೂರಾರು ಸಂಖ್ಯೆಯ ಗ್ರಾಮಸ್ಥರು ಸಾಮಾಜಿಕ ಕಲ್ಯಾಣ, ಉದ್ಯೋಗ, ಅನಾರೋಗ್ಯ, ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ, ರಸ್ತೆ ಕಾಮಗಾರಿ, ಶಾಲೆಗಳ ದುರಸ್ಥಿ ಅರಣ್ಯ ಅತಿಕ್ರಮಣ ಮುಂತಾದ ಸಮಸ್ಯೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ಪರಿಹಾರ ಕೈಗೊಳ್ಳುವಂತೆ ಸೂಚಿಸಲಾಯಿತು. ಈ ಸಭೆಯಲ್ಲಿ ಬೆಂಗ್ರೆ ಗ್ರಾ.ಪಂ ಅಧ್ಯಕ್ಷೆ ಪ್ರಮೀಳಾ ಡಿಕೋಸ್ತಾ, ಉಪಾಧ್ಯಕ್ಷ ಗೋವಿಂದ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಭಾಸ್ಕರ ನಾಯ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಾರ್ವಜನಿಕರ ಮಧ್ಯ ಸರತಿಯ ಸಾಲಿನಲ್ಲಿ ನಿಂತು ಸಚಿವ ಮಂಕಾಳ ವೈದ್ಯ ಭೋಜನ ಸೇವಿಸಿದರು.

Comments


Top Stories

bottom of page