ಬದುಕನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಕನ್ನಡಕ್ಕಿದೆ : ರಾಮಕೃಷ್ಣ ಭಟ್ಟ ದುಂಡಿ
- Ananthamurthy m Hegde
- Dec 23, 2024
- 1 min read
ಯಲ್ಲಾಪುರ: ಕನ್ನಡ ಕೇವಲ ಭಾಷೆಯಲ್ಲ. ಋಷಿ ಸಮಾನರಾದ ಕನ್ನಡದ ಚಿಂತಕರು, ಸಾಹಿತಿಗಳ ಅನುಭವದ ಸಾರ ಇದರಲ್ಲಿದೆ. ನಮ್ಮ ಬದುಕನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಕನ್ನಡಕ್ಕಿದೆ ಎಂದು ಹಿರಿಯ ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಡಿ ಹೇಳಿದರು.
ಅವರು ತಾಲೂಕಿನ ಮಂಚಿಕೇರಿ ಶ್ರೀ ರಾಜರಾಜೇಶ್ವರಿ ಸಭಾಭವನದ ರಾ.ಭ.ಹಾಸಣಗಿ ವೇದಿಕೆಯಲ್ಲಿ ತಾಲೂಕಿನ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ, ಮಾತನಾಡಿದರು. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಸಾಂಸ್ಕೃತಿಕ ಬದುಕಿನ ಅವಿಚ್ಛಿನ್ನ ಪರಂಪರೆ ಕಡಿದು ಬೀಳಬಹುದಾದ ಭಯ ನಮ್ಮನ್ನು ಕಾಡುತ್ತಿದೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳ ನಡುವಿನ ಸಂಘರ್ಷ ಇದಕ್ಕೆ ಕಾರಣವಾಗಿದೆ. ರಾಷ್ಟ್ರೀಯತೆಯ ಶಕ್ತಿ ಪ್ರಾದೇಶಿಕತೆಯನ್ನು ನುಂಗಿ ಹಾಕುವ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಜನರ ಬದುಕಿಗೆ ಪ್ರಾದೇಶಿಕತೆಯ ಚಿಕ್ಕ ಸಂಸ್ಥಾನಗಳೇ ದಾರಿದೀಪವಾಗಿದೆ ಎಂದರು.
ತಾಲೂಕಿನಲ್ಲಿ ರೈತರು, ಜನಸಾಮಾನ್ಯರ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ದೂರವಾಗಬೇಕು. ಅರಣ್ಯ ಇಲಾಖೆಯೊಂದಿಗಿನ ರೈತರ ಸಂಘರ್ಷ ಬಗೆಹರಿಸಲು ಪರಿಣಾಮಕಾರಿ ಪ್ರಯತ್ನಗಳು ನಡೆಯಬೇಕು. ತಾಲೂಕಿನ ಎಲ್ಲ ಗ್ರಾಮೀಣ ರಸ್ತೆಗಳು ಸುಧಾರಣೆಯಾಗಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಗಂಭೀರವಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಿಮರ್ಶಕ ಶ್ಯಾಮಸುಂದರ ಬಿದ್ರಕುಂದಿ ಮಾತನಾಡಿ, ಕನ್ನಡ ನಮ್ಮ ನಾಡಿನ ಮನೆಯ ಭಾಷೆ. ನೈತಿಕ ಮಾರ್ಗ, ತತ್ವವನ್ನು ಹೇಳುವ ಸಾಹಿತ್ಯ ಕನ್ನಡದಲ್ಲಿ ಬಂದಿದೆ. ಕನ್ನಡದಲ್ಲಿ ಸಾಕಷ್ಟು ಶಬ್ದಗಳಿರುವಾಗ ಅನಗತ್ಯವಾಗಿ ಇಂಗ್ಲಿಷ್ ಶಬ್ದಗಳನ್ನು ತುರುಕಿ ಮಾತನಾಡುವ ಶೋಕೀ ಕಡಿಮೆಯಾಗಬೇಕು ಎಂದರು.
ಹಿರಿಯ ಸಾಹಿತಿ ವನರಾಗ ಶರ್ಮಾ ಅವರ 'ಮರಳಿ ಮಿನುಗಿತು ಕಾಮನಬಿಲ್ಲು' ಕಥಾ ಸಂಕಲನ ಲೋಕಾರ್ಪಣೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡಕ್ಕೆ ಎಂದಿಗೂ ಬಡತನ ಬಂದಿಲ್ಲ. ಕನ್ನಡ ಶ್ರೀಮಂತಿಕೆಯಿಂದ ವಿಜೃಂಭಿಸಿದೆ. ಬೇರೆ ಭಾಷೆಯನ್ನು ದ್ವೇಷಿಸುವ ಗುಣ ಕನ್ನಡಿಗರದ್ದಲ್ಲ. ಯಾವ ಬೇಧವಿಲ್ಲದೇ ಬೇರೆ ಭಾಷೆಯವರಿಗೆ ಆಶ್ರಯ ನೀಡಿರುವುದು ಕನ್ನಡಿಗರ ಹೆಗ್ಗಳಿಕೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ವಿ.ಕೋಮಾರ ಅವರು ರಾಮಕೃಷ್ಣ ಭಟ್ಟ ದುಂಡಿ ಅವರಿಗೆ ಧ್ವಜ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸಮ್ಮೇಳನ ದ್ವಾರಗಳನ್ನು ಉದ್ಘಾಟಿಸಿದರು.
ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ, ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ತಹಸೀಲ್ದಾರ ಯಲ್ಲಪ್ಪ ಗೊನ್ನೆಣ್ಣವರ್, ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಗ್ರಾ.ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಪ್ರಸಿದ್ಧ ಗಾಯಕ ಪಂ.ಗಣಪತಿ ಭಟ್ಟ ಹಾಸಣಗಿ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ, ಶ್ರೀರಂಗ ಕಟ್ಟಿ, ವೇಣುಗೋಪಾಲ ಮದ್ಗುಣಿ, ಸುಬ್ರಾಯ ಭಟ್ಟ ಬಕ್ಕಳ, ಎನ್.ಆರ್.ಹೆಗಡೆ, ಗುರುಪ್ರಸಾದ ಭಟ್ಟ, ವಿನೋದಾ ಪೂಜಾರಿ ಇತರರಿದ್ದರು. ತಾಲೂಕು ಕ.ಸಾ.ಪ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ ಸ್ವಾಗತಿಸಿದರು. ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಂದ್ರಹಾಸ ನಾಯ್ಕ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು. ಮಂಚಿಕೇರಿಯ ವಿವಿಧೆಡೆ ಸಾಗಿದ ಮೆರವಣಿಗೆಯಲ್ಲಿ ಕನ್ನಡದ ಘೋಷಣೆಗಳನ್ನು ಕೂಗುತ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
Comentarios