ಬರ ಪರಿಹಾರ ವ್ಯಾಜ್ಯ ನೀವೇ ಬಗೆ ಹರಿಸಿಕೊಳ್ಳಿ : ಸುಪ್ರೀಂ ಕೋರ್ಟ್ ತೀರ್ಪು
- Ananthamurthy m Hegde
- Dec 11, 2024
- 1 min read

ಹೊಸದಿಲ್ಲಿ: ಬರ ನಿರ್ವಹಣೆಗಾಗಿ 'ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ'ಯಿಂದ (ಎನ್‌ಡಿಆರ್‌ಎಫ್) ಹಣಕಾಸು ನೆರವು ನೀಡುವ ಸಂಬಂಧ ಇರುವ ಸಮಸ್ಯೆಯನ್ನು ಕೇಂದ್ರ ಮತ್ತು ಕರ್ನಾಟಕ ಸರಕಾರಗಳೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ.
ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ಕೋರಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಇದರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರಿದ್ದ ಪೀಠ ನಡೆಸಿತು.
ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಈ ವಿಚಾರದಲ್ಲಿ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ''ವ್ಯಾಜ್ಯವನ್ನು ನೀವೇ ಪರಿಹರಿಸಿಕೊಳ್ಳಬೇಕು,'' ಎಂದು ಸಲಹೆ ನೀಡಿತು. ಅಲ್ಲದೆ, ವಿಚಾರಣೆ ವೇಳೆ ಈ ಸಂಬಂಧ ಇದುವರೆಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ನ್ಯಾಯಪೀಠ ಪಡೆದುಕೊಂಡಿತು.
"ಇದುವರೆಗೂ ಎಷ್ಟು ನಿಧಿಯನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡಲಾಗಿದೆ,'' ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಪರ ವಕೀಲರು, ''ರಾಜ್ಯ ಸರಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 18,171 ಕೋಟಿ ರೂ. ನೆರವು ಕೋರಿತ್ತು. ಆದರೆ, ಕೇಂದ್ರ ಸರಕಾರ ಕೇವಲ 3,819 ಕೋಟಿ ರೂ. ನೀಡಿದೆ,'' ಎಂದು ಉತ್ತರಿಸಿದರು. ಇದಾದ ಬಳಿಕ ಮುಂದಿನ ವಿಚಾರಣೆಯನ್ನು ನ್ಯಾಯಪೀಠವು ಜನವರಿಗೆ ಮುಂದೂಡಿತು.
ಏಪ್ರಿಲ್ 29ರ ವಿಚಾರಣೆ ವೇಳೆ ಬರ ಪರಿಹಾರವಾಗಿ ಕೇಂದ್ರ ಸರಕಾರವು ಕರ್ನಾಟಕಕ್ಕೆ 3,400 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿತ್ತು. ಆಗ ರಾಜ್ಯ ಸರಕಾರವು, ''ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡದ ಕೇಂದ್ರ ಸರಕಾರದ ನಿರ್ಧಾರವು ರಾಜ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ,'' ಎಂದು ದೂರಿತ್ತು.
ಬರ ಪರಿಹಾರ ಬಿಡುಗಡೆಗಾಗಿ ಕರ್ನಾಟಕದ ಸಿಎಂ, ಸಚಿವರು ದಿಲ್ಲಿಯಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಬಳಿಕ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
Comments