ಮುಂಗಾರು ಮಳೆಗೆ ಶಾಲಾ ಮಕ್ಕಳ ಭತ್ತದ ನಾಟಿ, ಪಾಟಿಚೀಲ ಕಳಿಚಿ ಗದ್ದೆಗಿಳಿದ ಪುಟಾಣಿಗಳು!
- Ananthamurthy m Hegde
- Jul 8
- 1 min read

ಮಂಗಳೂರು: ತುಳುನಾಡಿನ ಚರಿತ್ರೆ ಹಾಗೂ ಜಾನಪದವನ್ನು ಗಮನಿಸಿದಾಗ ಕಂಡುಬರುವ ಸಾಮಾನ್ಯ ಸಂಗತಿ ಭತ್ತದ ಗದ್ದೆ. ಕೇರಳದ ಜನರು ರಬ್ಬರನ್ನೂ , ಮಲೆನಾಡಿನಿಂದ ಅಡಿಕೆಯನ್ನು ಉಡುಪಿ-ಮಂಗಳೂರು ಭಾಗಕ್ಕೆ ತರುವವರೆಗೂ ಭತ್ತದ ನಾಟಿ, ಗದ್ದೆ, ಪಾಡ್ದಾನ ಗಟ್ಟಿಯಾಗಿತ್ತು. ಆದರೆ ಈಗ ಬಹುತೇಕ ಗದ್ದೆಗಳು ಕಂಬಳಕ್ಕೆ ಮೀಸಲಾಗಿವೆ ಹೊರತೂ ಅಲ್ಲಿ ಭತ್ತ ಬೆಳೆಯುತ್ತಿಲ್ಲ ಮೇಲಾಗಿ ನಗರದ ಬದಿಯ ಭತ್ತದ ಗದ್ದೆಗಳು ಸೈಟ್ ಗಳಾಗಿವೆ. ಭತ್ತದ ಕೃಷಿ ನಿಧಾನವಾಗಿ ಮಾಯವಾಗುತ್ತಿದೆ.ಇಡೀ ಊರಿಗೇ ಅಕ್ಕಿ ನೀಡುತ್ತಿದ್ದ ಗದ್ದೆಗಳು ಈಗ ಹಡೀಲು ಭೂಮಿಯಾಗಿ ಮಾರ್ಪಾಡಾಗಿವೆ.ಆದರೆ ಭತ್ತದ ಬೆಳೆಯನ್ನು ಉಳಿಸುವ ಕಾರ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಭತ್ತದ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಭತ್ತದ ಕೃಷಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮೂಡಬಿದಿರೆ ಸಮೀಪದ ಕಡಂದಲೆಯಲ್ಲಿ ನಡೆದಿದೆ.
ಭತ್ತ ನೆಡಲು ಬಂದರು ಪತ್ರಕರ್ತರು, ಗಣ್ಯರು:
ಪುತ್ತಿಗೆ ಗುತ್ತು ಕಡಂದಲೆ ಪರಾರಿ ಮನೆಯ ಭತ್ತದ ಗದ್ದೆಯಲ್ಲಿ ರವಿವಾರ ದ.ಕ ಜಿಲ್ಲಾ ವಾರ್ತಾ ಇಲಾಖೆ,ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು,ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ,ಲಯನ್ಸ್ ಕ್ಲಬ್ ಕಡಂದಲೆ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ಕಿನ್ನಿಗೋಳಿ, ಮೂಲ್ಕಿ ಮತ್ತು ಮೂಡಬಿದ್ರೆ ಪತ್ರಕರ್ತರ ಸಂಘ,ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೇಜಿ (ಸಸಿ) ನೆಡುವ ಪ್ರಾತ್ಯಕ್ಷಿಕೆಯನ್ನು ಮಾಡಲಾಗಿದೆ. ದೇಶಕ್ಕೆ ಅನ್ನ ನೀಡುವ ರೈತರಿಗೆ ಅವರ ಕೃಷಿ ಕೆಲಸ ಕಾರ್ಯಗಳನ್ನು ಹೊಂದಿಕೊಂಡಂತೆಯೇ ಆಸಕ್ತಿ ಹಾಗೆಯೇ ವ್ಯವಸಾಯದ ಮೇಲೆಯೇ ಬದುಕು ಇರುತ್ತದೆ.
ಈ ನಿಟ್ಟಿನಲ್ಲಿ ಇಂದಿನ ಪೀಳಿಗೆಯ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಈ ರೀತಿಯ ಪ್ರಯೋಗ ನಡೆಸಲಾಗಿದೆ. "ಹಳೆ ಬೇರು,ಹೊಸ ಚಿಗುರು ಕೂಡಿರಲು ಮರ ಸೊಗಸು" ಎಂಬಂತೆ ಕೃಷಿಯ ಬಗ್ಗೆ ಹಿರಿಯ ಮೂಲಕ ಕಿರಿಯರಿಗೆ ಅವರ ಅನುಭವವನ್ನು ಧಾರೆಯೆರಲಾಗಿದೆ.
ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಟಿ ಕಾರ್ಯ
ಪುತ್ತಿಗೆ ಗುತ್ತುಪರಾರಿ ಕುಟುಂಬದ ಯಜಮಾನ ಸಂತೋಷ್ ಕುಮಾರ್ ಶೆಟ್ಟಿಯವರು ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಬಾಕಿಮಾರು ಗದ್ದೆಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ರೋಟರಿ ಸದಸ್ಯರು ಕಡಂದಲೆ ಕುಟುಂಬದ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದಾರೆ.
Comments