ಮುಡಾ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಸರ್ಕಾರ
- Ananthamurthy m Hegde
- Dec 24, 2024
- 1 min read

ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಮೈಸೂರಿನ ಮುಡಾ ಪ್ರಾಧಿಕಾರ ರಾಜಕೀಯ ಕಾರಣಕ್ಕೆ ಭಾರೀ ಸುದ್ದಿಯಲ್ಲಿದೆ. ಇದೀಗ ಮುಡಾ ಆಯುಕ್ತರಿಗೆ ಸರ್ಕಾರದಿಂದಲೇ ಖಡಕ್ ಎಚ್ಚರಿಕೆ ನೀಡಲಾಗಿದೆ.
ಹೌದು.. ಮುಡಾ 50:50 ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾಗೆ ಭಾರೀ ನಷ್ಟ ಉಂಟು ಮಾಡಿರುವ ಅಧಿಕಾರಿಗಳನ್ನು ಬಚಾವ್ ಮಾಡಲು ಯತ್ನಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಲತಾ ಅವರು ಮುಡಾ ಆಯುಕ್ತ ರಘುನಂದನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಐ.ಎ.ಎಸ್ ಅಧಿಕಾರಿ ಪ್ರಭುಲಿಂಗ ಕಾವಲಿಕಟ್ಟಿ ತನಿಖಾ ವರದಿ ಹಿನ್ನೆಲೆ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ನೇತೃತ್ವದ ಸಮಿತಿ ಅಧ್ಯಕ್ಷ ಪ್ರಭುಲಿಂಗ ಕಾವಳಿ ಕಟ್ಟಿ ಅವರು 2024 ಜುಲೈ 24 ರಂದು ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, 2023 ಮಾರ್ಚ್ 14ರಂದು ಈ ಹಗರಣದ ತನಿಖೆಗೆ ಸರ್ಕಾರ ಸಮಿತಿಯನ್ನು ನೇಮಿಸಿತ್ತು. ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸೇರಿ ಹಲವು ಅಧಿಕಾರಿಗಳು, ಸಿಬ್ಬಂದಿಗಳು ಅಕ್ರಮದಲ್ಲಿ ಭಾಗಿಯಾಗಿದ್ದು, ಈ ಹಿನ್ನೆಲೆ ಅಧಿಕಾರಿಗಳ ಮಾಹಿತಿ ನೀಡಬೇಕೆಂದು ಅಧೀನ ಕಾರ್ಯದರ್ಶಿಗಳಿಂದ ಪತ್ರ ಬರೆಯಲಾಗಿದೆ.
50:50 ಅನುಪಾತದ ಪ್ರೋತ್ಸಾಹ ದಾಯಕ ಯೋಜನೆ, ಬದಲಿ ನಿವೇಶನ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ಕಂಡು ಬಂದಿರುವ ಅಕ್ರಮ ಅಧಿಕೃತ ಜ್ಞಾಪನಾ ಹೊರಡಿಸಿರುವ ಆಯುಕ್ತರು, ನಿವೇಶನ ಶಾಖೆ, ಲೆಕ್ಕಪತ್ರ ಶಾಖೆ, ಇಂಜಿನಿಯರಿಂಗ್ ಶಾಖೆ, ಉಪ ನೋಂದಣಾಧಿಕಾರಿಗಳ ಕುರಿತ ಸಮಗ್ರ ಮಾಹಿತಿಯನ್ನು 3 ದಿನದ ಒಳಗೆ ನೀಡುವಂತೆ ಪತ್ರ ಬರೆದಿದ್ದಾರೆ. ಅಲ್ಲದೇ, ಆರ್ಥಿಕ ನಷ್ಟದ ಮೊತ್ತವನ್ನು ಸಹ ಉಲ್ಲೇಖ ಮಾಡುವಂತೆ ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ಹೇಳಿದ್ದೇನು?
ಮುಡಾಗೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳನ್ನು ಬಚಾವ್ ಮಾಡಲು ಮುಂದಾದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ನಗರಾಭಿವೃದ್ದಿ ಕಾರ್ಯದರ್ಶಿ ಕೆ.ಲತಾ ಜ್ಞಾಪನ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ವಿರುದ್ಧವೇ ಕಿಡಿಕಾರಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಸ್ನೇಹಮಯಿ ಕೃಷ್ಣ, ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮೇಲೆ ಕ್ರಮ ಆಗಿದೆ ಅಂತ ಸಚಿವ ಭೈರತಿ ಸುರೇಶ್ ಹೇಳ್ತಾರೆ. ಅದೇ ಮಾಜಿ ಆಯುಕ್ತ ನಟೇಶ್ ವಿರುದ್ಧ ಕ್ರಮ ಆಗಿಲ್ಲ, ಒಂದು ವೇಳೆ ನಟೇಶ್ ಮೇಲೆ ಕ್ರಮ ಆದ್ರೆ ಸರ್ಕಾರ ಬಿದ್ದು ಹೋಗುತ್ತೆ, ಎಲ್ಲಾ ಸತ್ಯಗಳು ಹೊರ ಬರುತ್ತೆ. ಸಿದ್ದರಾಮಯ್ಯ ಪತ್ನಿ ಸೈಟ್ ಸತ್ಯಗಳು ಹೊರ ಬರುತ್ತೆ. ಹೀಗಾಗಿ ನಟೇಶ್ ವಿರುದ್ಧ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
Comments