top of page

ಮೊಮ್ಮಗನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ಟೆಕ್ಕಿ ಅತುಲ್ ಸುಭಾಷ್ ತಾಯಿ

  • Writer: Ananthamurthy m Hegde
    Ananthamurthy m Hegde
  • Dec 21, 2024
  • 1 min read
ree

ನವದೆಹಲಿ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ತಾಯಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸುಭಾಷ್ ಅವರ ನಾಲ್ಕು ವರ್ಷದ ಪುತ್ರನನ್ನು ತಮ್ಮ ಜವಾಬ್ದಾರಿಗೆ ಒಪ್ಪಿಸಬೇಕು ಎಂದು ಸುಭಾಷ್ ತಾಯಿ ಅಂಜು ಮೋದಿಯವರು ಮನವಿ ಸಲ್ಲಿಸಿದ್ದಾರೆ.

ಈ ಕುರಿತಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಅವರು, ತಮ್ಮ ಮೊಮ್ಮಗ ಎಲ್ಲಿದ್ದಾನೆಂಬುದು ಇಲ್ಲಿಯವರೆಗೆ ನಮಗೆ ತಿಳಿದಿಲ್ಲ. ಈಗ ಬೆಂಗಳೂರು ಪೊಲೀಸರ ಬಂಧನದಲ್ಲಿರುವ ಸುಭಾಷ್ ರವರ ಪರಿತ್ಯಕ್ತ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ಅಪ್ಪ - ಅಪ್ಪ ಹಾಗೂ ಸಹೋದರ ಸಹ ಆ ಮಗು ಎಲ್ಲಿದೆ ಎಂಬುದನ್ನು ಎಲ್ಲೂ ಬಾಯಿಬಿಟ್ಟಿಲ್ಲ. ನನಗೆ ನನ್ನ ಮೊಮ್ಮಗು ಬೇಕು. ದಯವಿಟ್ಟು ತಮಗೆ ಸಹಾಯ ಮಾಡಿ ಎಂದು ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಡಿ. 20ರಂದು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ನ್ಯಾ. ಎನ್. ಕೋಟೀಶ್ವರ್ ಸಿಂಗ್ ಅವರುಳ್ಳ ದ್ವಿಸದಸ್ಯ ನ್ಯಾಯಪೀಠ, ಉತ್ತರ ಪ್ರದೇಶ, ಹರ್ಯಾಣ ಹಾಗೂ ಕರ್ನಾಟಕ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ, ಈ ಕುರಿತಂತೆ ಸ್ಪಷ್ಟನೆ ನೀಡಬೇಕೆಂದು ಹೇಳಿದೆಯಲ್ಲದೆ, ಅರ್ಜಿಯ ಮುಂದಿನ ವಿಚಾರಣೆಯನ್ನು ಜ. 7ಕ್ಕೆ ಮುಂದೂಡಿದೆ.

ಸುಭಾಷ್ - ನಿಕಿತಾ ಅವರ ಮಗುವನ್ನು ಹುಡುಕಲು ತಾವು ಮಾಡಿದ ಪ್ರಯತ್ನಗಳಿಗೆ ನಿಕಿತಾ ಹಾಗೂ ಆಕೆಯ ಸಂಬಂಧಿಕರು ಅಡ್ಡಗಾಲು ಹಾಕಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಜು ಮೋದಿ, ತಮ್ಮ ಮೊಮ್ಮಗ ಎಲ್ಲಿದ್ದಾನೆಂಬ ಸುಳಿವನ್ನೂ ಅವರು ಬಿಟ್ಟುಕೊಡುತ್ತಿಲ್ಲ ಎಂದು ಹೇಳಿದ್ದಾರೆ. ಅತುಲ್ ತಾಯಿಯಷ್ಟೇ ಅಲ್ಲದೆ, ಅವರ ತಂದೆ ಪವನ್ ಕುಮಾರ್ ಕೂಡ ತಮ್ಮ ಮೊಮ್ಮಗನ ಜವಾಬ್ದಾರಿಯನ್ನು ತಮಗೆ ಒಪ್ಪಿಸಬೇಕೆಂದು ಈ ಹಿಂದೆ ಮಾಧ್ಯಮಗಳ ಮುಂದೆ ಕೋರಿದ್ದರು.

ನಿಕಿತಾ ಸಿಂಘಾನಿಯಾ ಅವರು, ಪೊಲೀಸರಿಗೆ ನೀಡಿರುವ ಪುನರಾವರ್ತಿತ ಹೇಳಿಕೆಗಳಲ್ಲಿ ತಮ್ಮ ಪುತ್ರ ತಮ್ಮ ಚಿಕ್ಕಪ್ಪನವರಾದ ಸುಶೀಲ್ ಸಿಂಘಾನಿಯಾ ಅವರ ಆಶ್ರಯದಲ್ಲಿದ್ದಾನೆ. ಆತ ಫರಿದಾಬಾದ್ ಬೋರ್ಡಿಂಗ್ ಸ್ಕೂಲ್ ಒಂದಕ್ಕೆ ತಮ್ಮ ಪುತ್ರನನ್ನು ಸೇರಿಸಲಾಗಿದೆ ಎಂದು ಹೇಳಿದ್ದರು. ಆದರೆ, ಪೊಲೀಸರಿಗೆ ಮಾಹಿತಿ ನೀಡಿರುವ ಸುಶೀಲ್ ಸಿಂಘಾನಿಯಾ, ತಮಗೆ ನಿಕಿತಾ ಪುತ್ರನ ಬಗ್ಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ. ಇದರಿಂದ ಕಂಗಾಲಾಗಿರುವ ಸುಭಾಷ್ ಅವರ ತಾಯಿ ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

Comments


Top Stories

bottom of page