top of page

ಯೋಗ ಸಮ್ಮೇಳನ ಒಂದು ಜಾಗೃತಿಯ ಕಾರ್ಯಕ್ರಮ

  • Writer: Ananthamurthy m Hegde
    Ananthamurthy m Hegde
  • Jan 13
  • 2 min read

ಯಲ್ಲಾಪುರ: ಯೋಗದಿಂದ ಆರೋಗ್ಯ, ಮಾನಸಿಕ, ಶಾರೀರಿಕ, ಎಲ್ಲ ಸಂಪತ್ತನ್ನು ಗಳಿಸಬಹುದು. ಆ ನೆಲೆಯಲ್ಲಿ ಯೋಗ ಸಮ್ಮೇಳನವನ್ನು ಹಮ್ಮಿಕೊಂಡಿರುವುದು ಒಂದು ಜಾಗೃತಿಯ ಕಾರ್ಯಕ್ರಮ ಇದಾಗಿದೆ ಎಂದು ಅಂತರಾಷ್ಟ್ರೀಯ ಯೋಗಪಟು ಗಣಪತಿ.ಎನ್.ಹೆಗಡೆ ಸಿದ್ದಾಪುರ ಹೇಳಿದರು.

ಅವರು, ಜ.೧೨ ರಂದು ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಯಲ್ಲಾಪುರ ತಾಲೂಕಾ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉತ್ತರಕನ್ನಡ ಯೋಗ ಫೆಡರೇಶನ್ ಶಿರಸಿ ಮತ್ತು ಯಲ್ಲಾಪುರ ಅಡಿಕೆ ವ್ಯವಹಾರಸ್ಥರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಯೋಗ ಸಮ್ಮೇಳನ ಮತ್ತು ಯೋಗ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ವಿದ್ಯಾರ್ಥಿ ಜೀವನದಿಂದಲೇ ಯೋಗವನ್ನು ಅಳವಡಿಸಿಕೊಂಡರೆ, ಅವರ ಬದುಕಿಗೆ ಪರಿಣಾಮಕಾರಿಯಾದ ಸಂತೃಪ್ತ ಜೀವನ ಪಡೆಯಬಹುದು. ಇಂದು ಜಗತ್ತಿನಾದ್ಯಂತ ಯೋಗದ ಮಹತ್ವದ ಅರಿವಾಗಿದೆ. ಯೋಗವೂ ಕೂಡಾ ಒಲಂಪಿಕ್ ಕ್ರೀಡೆಯಲ್ಲಿ ಸೇರ್ಪಡೆಗೊಳ್ಳುತ್ತಿದೆ. ನಮ್ಮ ಮಕ್ಕಳಿಗೆ ಯೋಗದ ಜೊತೆ ಭಾರತೀಯ ಸಂಸ್ಕೃತಿ, ಪರಂಪರೆ, ಮೌಲ್ಯ ಮತ್ತು ಗುರು ಹಿರಿಯರನ್ನು ಗೌರವಿಸುವ ಶಿಕ್ಷಣ ನೀಡಬೇಕಾಗಿದೆ. ಶಾಲೆಗಳಲ್ಲಿ ವ್ಯವಹಾರಿಕ ಶಿಕ್ಷಣ ಮಾತ್ರ ಲಭಿಸುತ್ತದೆ. ಇಂತಹ ಸಮ್ಮೇಳನದ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿದ್ದೇವೆ. ಆ ದೃಷ್ಟಿಯಿಂದ ಯಲ್ಲಾಪುರದ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ನಮ್ಮ ಇಂದ್ರಿಯಗಳು ನಮಗರಿವಿಲ್ಲದೇ ನಿಯಂತ್ರಣ ತಪ್ಪಿ ಸಾಗುವ ಅಪಾಯವಿರುತ್ತದೆ. ಅದಕ್ಕೆ ಯೋಗವೊಂದೇ ಪರಿಹಾರ. ವ್ಯವಹಾರಿಕ ನಿತ್ಯ ಜೀವನದಲ್ಲಿ ಎಷ್ಟೇ ಕಾರ್ಯಗಳ ಒತ್ತಡ, ವಿದ್ಯಾಥಿಗಳಿಗೆ ಶಾಲೆಯ ಒತ್ತಡವಿದ್ದರೂ ನಿತ್ಯ ತಪ್ಪದೇ ಯೋಗಾಧ್ಯಯನ ಮಾಡಬೇಕು. ಅದು ಜೀವನದ ಅವಿಭಾಜ್ಯ ಅಂಗವಾಗಬೇಕು. ವಾತ, ಪಿತ್ತ, ಕಫ ಈ ಮೂರೂ ಪ್ರಕೃತಿಯಿಂದಾಗಿ ನಮ್ಮ ದೇಹವನ್ನು ಸೇರುತ್ತವೆ. ಅದನ್ನು ಯೋಗದಿಂದ ಮಾತ್ರ ನಿಯಂತ್ರಿಸಬಹುದಲ್ಲದೇ, ಸ್ಫರ್ಧಾ ಜಗತ್ತಿನಲ್ಲಿದ್ದ ನಾವು ಜಗತ್ತಿನಲ್ಲಿ ಜೀವನದ ಸವಾಲು ಎದುರಿಸಬೇಕಾಗುತ್ತದೆ. ಜಗತ್ತಿಗೇ ಯೋಗ ನೀಡಿದ ಭಾರತ ನಮ್ಮ ಭಾರತೀಯ ಮೌಲ್ಯ, ಸಂಸ್ಕೃತಿ ರಕ್ಷಕರಾಗಬೇಕು ಎಂದರು.

ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಮಾತನಾಡಿ, ಎಷ್ಟೇ ಹಣ, ಐಶ್ವರ್ಯಗಳಿದ್ದರೂ ಆರೋಗ್ಯ ಸಿಗುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ಸಣ್ಣಂದಿನಿಂದಲೇ ಯೋಗಾಭ್ಯಾಸ ಬೆಳೆಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರ ತಾಲೂಕಾ ಯೋಗ ಸ್ಪೋರ್ಟ್ಸ ಅಸೋಸಿಯೇಶನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಇಂದು ಪ್ರಯೋಗಾತ್ಮಕವಾಗಿ ಈ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ. ಪಾಲಕರು ಹೆಚ್ಚು ಆಸಕ್ತಿ ವಹಿಸಿ, ತಮ್ಮ ಮಕ್ಕಳನ್ನು ಯೋಗದ ತರಬೇತಿಗೆ ಕಳಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವಂತೆ ಗಮನ ಹರಿಸಬೇಕು. ಬದುಕಿಗೆ ಹಣವೊಂದೇ ಪ್ರಧಾನವಲ್ಲ. ಆರೋಗ್ಯ ಅತ್ಯಂತ ಮಹತ್ವದ್ದು. ಹಾಗಾಗಿ ಮಕ್ಕಳನ್ನು ಯೋಗಿಗಳನ್ನಾಗಿಸಿ, ಇಂದು ೮ ವರ್ಷದಿಂದ ೭೬ ವರ್ಷದವರೂ ೧೭೫ ಯೋಗ ಸಾಧಕರು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ಸಮ್ಮೇಳನಕ್ಕೆ ಮೆರಗು ತಂದಿದ್ದಾರೆ ಎಂದರು.

ತಾಲೂಕಾ ಉಪಾಧ್ಯಕ್ಷ ನಾಗೇಶ ರಾಯ್ಕರ್, ಕೋಶಾಧ್ಯಕ್ಷ ಡಿ.ಎನ್.ಗಾಂವ್ಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಯೋಗ ಸಾಧಕರಾದ ಶಂಕರ ಭಟ್ಟ ಪುಣೆ, ಮಂಜುನಾಥ ದೇಸಾಯಿ, ವಿಶಾಲಾಕ್ಷಿ ಭಟ್ಟ, ನಾರಾಯಣ ಭಾಗ್ವತ, ಡಿ.ಎನ್.ಗಾಂವ್ಕರ, ರವಿ ಹೆಗಡೆ, ವಿ.ಕೆ.ಭಟ್ಟ, ನೇಮಿರಾಜ, ಪಾರ್ವತಿ ಹೆಗಡೆ, ನಾಗವೇಣಿ ಹೆಗಡೆ, ಜಾಹ್ನವಿ ಹೆಗಡೆ ಇವರುಗಳನ್ನು ಸನ್ಮಾನಿಸಲಾಯಿತು. ಶಿಕ್ಷಕಿ ರಾಧಾ ಭಟ್ಟ ಪ್ರಾರ್ಥಿಸಿದರು. ಸಂಶ್ಥೆಯ ಸಹಕಾಯದಶಿ ಚಂದ್ರಶೇಖರ ಭಟ್ಟ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಅನಿಲ ಕರಿ ಪ್ರಾಸ್ತಾವಿಕ ಮಾತನಾಡಿದರು. ಶಿವಪ್ರಸಾದ ಭಟ್ಟ ನಿರ್ವಹಿಸಿದರು. ಯೋಗ ಮಾತೆ ಆಶಾ ಭಗನಗದ್ದೆ ವಂದಸಿದರು.

Comments


Top Stories

bottom of page