ಯಕ್ಷಗಾನ ಉಳಿಸಲು ಯುವಕರು ಮುಂದಾಗಬೇಕು
- Ananthamurthy m Hegde
- Dec 31, 2024
- 1 min read
ಯಲ್ಲಾಪುರ: ಅತ್ಯಂತ ಪ್ರಾಚೀನವಾದ ಕಲೆ ಯಕ್ಷಗಾನ. ಈ ಕಲೆ ಉಳಿಸುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು ಎಂದು ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಹೇಳಿದರು.
ಅವರು ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಇವರ ಆಶ್ರಯದಲ್ಲಿ ನಿಸ್ವಾರ್ಥ ಕಲಾ ಸೇವಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
'ದಿವ್ಯ ದೀವಟಿಗೆ' ಪುಸ್ತಕ ಲೋಕಾರ್ಪಣೆಗೊಳಿಸಿದ ಪ್ರಾಧ್ಯಾಪಕ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಮಾತನಾಡಿ, ನಿಸ್ವಾರ್ಥವಾಗಿ ಕಲಾ ಸೇವೆ ಮಾಡಿದ ಕಲಾವಿದರ ದಿವ್ಯ ಶ್ರಮ, ಯುವ ಜನಾಂಗಕ್ಕೆ ದೀವಟಿಗೆಯಾಗಲಿ ಎಂದರು.
ಬರಹಗಾರ ದತ್ತಾತ್ರೇಯ ಕಣ್ಣಿಪಾಲ ಪುಸ್ತಕ ಪರಿಚಯಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯಿಂದ 45 ಕಲಾವಿದರಿಗೆ ಗೌರವ ಸಮರ್ಪಿಸಲಾಯಿತು. ಪ್ರತಿಭಾನ್ವಿತ ಕಲಾವಿದ ಶ್ರೀವತ್ಸ ಗುಡ್ಡೆದಿಂಬ ಅವರಿಗೆ ಕಲಾ ಸನ್ನಿಧಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಕೋಶಾಧ್ಯಕ್ಷ ದಿನೇಶ ಭಟ್ಟ ಯಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ, ದೇವಸ್ಥಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಉಪಸ್ಥಿತರಿದ್ದರು.
ಕರ್ನಾಟಕ ಕಲಾ ಸನ್ನಿಧಿ ಅಧ್ಯಕ್ಷ ಶ್ರೀಧರ ಅಣಲಗಾರ, ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ, ಸಹಕಾರ್ಯದರ್ಶಿ ದಿನೇಶ ಗೌಡ ಮಾವಿನಮನೆ ನಿರ್ವಹಿಸಿದರು. ನಂತರ ಸ್ಥಳೀಯ ಕಲಾವಿದರಿಂದ ಗಾನ ಸಂಜೆ ಕಾರ್ಯಕ್ರಮ ನಡೆಯಿತು.
Kommentare