ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭ್ರಮದ 'ಜಾನಪದ ಉತ್ಸವ'
- Ananthamurthy m Hegde
- May 24
- 1 min read

ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 'ಜಾನಪದ ಉತ್ಸವ'ವನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಾನಪದ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ್ದು ವಿಶೇಷವಾಗಿತ್ತು.
ಶಾಸಕ ಶಿವರಾಮ ಹೆಬ್ಬಾರ ಭತ್ತ ಕುಟ್ಟುವ ಮೂಲಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವಾಳ. ಇವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯ ಎಂದರು. ತಮ್ಮ ಬಾಲ್ಯದ ಜಾನಪದೀಯ ಸಂಭ್ರಮಾಚರಣೆಗಳನ್ನು ಮೆಲುಕು ಹಾಕಿದ ಅವರು, ಜಾನಪದ ಕಲೆಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಕಾಲೇಜಿನಲ್ಲಿ ಈ ಉತ್ಸವ ಆಯೋಜಿಸಿದ್ದು ಶ್ಲಾಘನೀಯ ಎಂದರು.
ಪ್ರಾಂಶುಪಾಲ ಡಾ. ಆರ್ ಡಿ ಜನಾರ್ದನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಜಾನಪದ ಉತ್ಸವವು ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಉತ್ತಮ ವೇದಿಕೆಯಾಗಿದೆ" ಎಂದರು.
ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಮಾತನಾಡಿದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಉತ್ತರ ಕನ್ನಡದ ವಿಶಿಷ್ಟ ಜಾನಪದ ನೃತ್ಯಗಳಾದ ಸುಗ್ಗಿ ಕುಣಿತ, ಕೋಲಾಟ, ಹಾಲಕ್ಕಿ ಕುಣಿತಗಳು ವಿಶೇಷ ಗಮನ ಸೆಳೆದವು. ಇದರೊಂದಿಗೆ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಗಾರುಡಿಗೊಂಬೆ, ಭಜನೆ ಪದಗಳು, ಸೋಬಾನೆ ಪದಗಳು, ಮತ್ತು ಲಾವಣಿ, ಭರತನಾಟ್ಯ, ಗೌಳಿ ನೃತ್ಯ ಪ್ರೇಕ್ಷಕರನ್ನು ರಂಜಿಸಿದವು.
ಜಾನಪದ ಸಂಸ್ಕೃತಿಯನ್ನು ಬಿಂಬಿಸಲು, ಕಾಲೇಜಿನ ಆವರಣದಲ್ಲಿ ಜಾನಪದ ಕರಕುಶಲ ವಸ್ತುಗಳ ಪ್ರದರ್ಶನ, ದೇಶಿ ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಸ್ಥಳೀಯ ಕಲಾವಿದರು ತಯಾರಿಸಿದ ಮರದ ಕೆತ್ತನೆಗಳು, ಬಿದಿರಿನ ಉತ್ಪನ್ನಗಳು, ಮಣ್ಣಿನ ಮಡಿಕೆಗಳು ಮತ್ತು ಸಾಂಪ್ರದಾಯಿಕ ಉಡುಗೆಗಳು ಗಮನ ಸೆಳೆದವು. ಗ್ರಾಮೀಣ ಸೊಗಡಿನ ಸಿಹಿ ಮತ್ತು ಖಾರದ ತಿನಿಸುಗಳ ಮಳಿಗೆಗಳು ಉತ್ಸವಕ್ಕೆ ಮೆರುಗು ನೀಡಿದವು.
ಸಹಾಯಕ ಪ್ರಾಧ್ಯಾಪಕರಾದ ಶರತ್ ಕುಮಾರ್, ಶಾಂತೇರಿ ದಾಮೋದರ್ ಪೈ, ವಿದ್ಯಾರ್ಥಿಗಳಾದ ವೇದಾ ಭಟ್ಟ, ಮೇಘಾ ದೇವಳಿ, ಕಾವ್ಯಶ್ರೀ ಮರಾಠಿ, ನಂದಿತಾ ಭಾಗವತ ನಿರ್ವಹಿಸಿದರು.
Comments