top of page

ರಾಜ್ಯ್ದದಲ್ಲಿ ಮಾದಕ ದ್ರವ್ಯ ಮಟ್ಟ ಹಾಕಲು ಸರ್ಕಾರದಿಂದ 'ರಕ್ಷಾ ಕ್ಯೂಆರ್ ಕೋಡ್'ಗೆ ಚಾಲನೆ

  • Writer: Ananthamurthy m Hegde
    Ananthamurthy m Hegde
  • Jun 27
  • 1 min read
ree

ಬೆಂಗಳೂರು: ರಾಜ್ಯದಲ್ಲಿ ಮಾದಕ ದ್ರವ್ಯ ಜಾಲ ಮಟ್ಟ ಹಾಕಲು ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತುರ್ತು ನೆರವಿಗಾಗಿ ರಕ್ಷಾ ಕ್ಯೂಆರ್ ಕೋಡ್‌ಗೆ ಚಾಲನೆ ನೀಡಿದೆ.

66ನೇ ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ರಕ್ಷಾ ಕ್ಯೂಆರ್ ಕೋಡ್‌ಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಮಾದಕ ವಸ್ತು ವ್ಯಸನಕ್ಕೆ ಸಿಲುಕಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ರಾಜ್ಯದ ಸರಿ ಸುಮಾರು 6.5 ಲಕ್ಷ ವಿದ್ಯಾರ್ಥಿಗಳಿಗೆ ಡ್ರಗ್ಸ್ ದುಷ್ಪರಿಣಾಮ ಕುರಿತು ಅರಿವು ಮೂಡಿಸಲಾಗಿದೆ. ಪ್ರತಿ ತಿಂಗಳು ತಮ್ಮ ಠಾಣಾ ಸರಹದ್ದಿನ ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯಬೇಕು. ಅಲ್ಲದೆ, ಡ್ರಗ್ಸ್ ಮಾರಾಟ ಜಾಲಕ್ಕೆ ವಿದ್ಯಾರ್ಥಿಗಳು ಸಿಲುಕದಂತೆ ತಡೆಗಟ್ಟಲು ಕಾಲೇಜು ಮಟ್ಟದಲ್ಲಿ ಮಾದಕ ವಸ್ತು ನಿಗ್ರಹ ಸಮಿತಿ ರಚಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಡ್ರಗ್ಸ್ ವಿಚಾರದಲ್ಲಿ ರಾಜ್ಯ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ರಾಜೀಮಾಡಿಕೊಳ್ಳುವುದಿಲ್ಲ. ಡ್ರಗ್ಸ್ ಚಟುವಟಿಕೆಯ ಬಗ್ಗೆ ಗೊತ್ತಾದ ಕೂಡಲೇ ಸಾರ್ವಜನಿಕರು ಕ್ಯೂ ಆರ್‌ಕೋಡ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಬೇಕು. ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾನೂನುಬಾಹಿರ ಕೃತ್ಯಗಳಿಗೆ ನಾಗರಿಕರು ಆಸ್ಪದ ಕೊಡಬಾರದು ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ನಡೆದಿದೆ. ಡ್ರಗ್ಸ್‌ನಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ, ಈ ಜಾಲವನ್ನು ಕೇವಲ ಕಾನೂನು ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ಜನರು ಜಾಗೃತರಾಗಬೇಕು ಎಂದರು.

ಈಗಾಗಲೇ ಡ್ರಗ್ಸ್ ಪೆಕ್ಲರ್‌ಗಳ ವಿರುದ್ಧ ಆಸ್ತಿ ಮುಟ್ಟುಗೋಲು ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣದಂಥ ಕಠಿಣ ಕ್ರಮ ಜರುಗಿಸಲಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲೇ ಮಾದಕ ವ್ಯಸನ ಮುಕ್ತ ಕರ್ನಾಟಕ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಪಂಜಾಬ್‌ನಲ್ಲಿ ಡ್ರಗ್ಸ್ ಪರಿಣಾಮದಿಂದ ಉಡ್ತಾ ಪಂಜಾಬ್ ಎಂದು ಕರೆಯುತ್ತಿದ್ದರು. ಇದಕ್ಕೆ ರಾಜ್ಯ ದಲ್ಲಿ ಆಸ್ಪದ ನೀಡುವುದಿಲ್ಲ. ಡ್ರಗ್ಸ್ ಚಟುವಟಿಕೆಯನ್ನು ಮಟ್ಟಹಾಕಲು ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಗುಡುಗಿದರು.

ಇದೇ ವೇಳೆ ಕಳೆದ ಒಂದು ವರ್ಷದಲ್ಲಿ ನಾಲ್ಕು ಟನ್ ಗಾಂಜಾ ಸೇರಿ 45 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 200ಕ್ಕೂ ಹೆಚ್ಚು ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಪ್ತಿಯಾದ ಡ್ರಗ್ಸ್ ಅನ್ನು ನಾಶಗೊಳಿಸುವ ಕಾರ್ಯಕ್ಕೆ ಗೃಹ ಸಚಿವರು ಆನ್‌ಲೈನ್‌ ಮೂಲಕ ಚಾಲನೆ ನೀಡಿದರು.

Comments


Top Stories

bottom of page