ರಾಜ್ಯದಲ್ಲಿ 2 ವರ್ಷದಲ್ಲಿ 2,349 ಕೊಲೆ, 1103 ಅತ್ಯಾಚಾರ
- Ananthamurthy m Hegde
- Dec 23, 2024
- 1 min read

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ 2,349 ಕೊಲೆ, 1103 ಅತ್ಯಾಚಾರ, 6519 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಗೃಹ ಇಲಾಖೆ ನೀಡಿರುವ ಅಂಕಿ- ಅಂಶಗಳನ್ನು ಗಮನಿಸಿದರೆ ಬೆಚ್ಚಿ ಬೀಳಿಸುವಂತಿದೆ.
ಯಾವ ಪ್ರಕರಣಗಳು ಎಷ್ಟೆಷ್ಟು ?
ಕೊಲೆ ಪ್ರಕರಣಗಳ ಸಂಖ್ಯೆ- 2023ರಲ್ಲಿ1263, 2024ರಲ್ಲಿ 1086
ಅತ್ಯಾಚಾರ ಪ್ರಕರಣಗಳ ಸಂಖ್ಯೆ - 2023ರಲ್ಲಿ 563, 2024ರಲ್ಲಿ 540
ವರದಕ್ಷಿಣೆ ಸಾವು ಪ್ರಕರಣಗಳ ಸಂಖ್ಯೆ- 2023ರಲ್ಲಿ157, 2024ರಲ್ಲಿ 540
ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ-2023ರಲ್ಲಿ 6462, 2024ರಲ್ಲಿ 5873
ವರದಕ್ಷಿಣೆ ಕಿರುಕುಳ 2023ರಲ್ಲಿ 2911, 2024ರಲ್ಲಿ 2719
ಪೋಕ್ಸೋ ಪ್ರಕರಣ 2023ರಲ್ಲಿ 3718, 2024ರಲ್ಲಿ 3419
ಗಲಭೆ ಪ್ರಕರಣ 2023ರಲ್ಲಿ 3899, 2024ರಲ್ಲಿ 3173 ಪ್ರಕರಣಗಳು ದಾಖಲಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಅದರಲ್ಲೂ ಮಹಿಳೆಯರ ಮೇಲಿನ ಅಪರಾಧಗಳನ್ನು ತಡಗಟ್ಟುವ ನಿಟ್ಟಿನಲ್ಲಿ ಫ್ರೀ ಆಂಡ್ ಫೇರ್ ರಿಜಿಸ್ಟ್ರೇಷನ್ ಆಫ್ ಕೇಸ್ ಎಂಬ ಘೋಷಾ ವಾಕ್ಯದೊಂದಿಗೆ ಪೊಲೀಸ್ ಇಲಾಖೆ ಕಾರ್ಯಾಚರಿಸುತ್ತಿದೆ ಎಂದು ವಿಧಾನಪರಿಷತ್‌ನಲ್ಲಿ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಗೃಹ ಇಲಾಖೆ ಉತ್ತರ ನೀಡಿದೆ.
ರಾಜ್ಯದಲ್ಲಿ ಹಿಂದಿನ ವರ್ಷಗಳ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ ಪ್ರಸ್ತುತ ಸಾಲಿನಲ್ಲಿ ವರದಕ್ಷಿಣೆ ಸಾವು ಪ್ರಕರಣಗಳು ಕಡಿಮೆಯಾಗಿವೆ. ಆದರೆ ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಪೋಕ್ಸೊ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಕಂಡು ಬಂದಿಲ್ಲ ಎಂದಿದೆ.
ಇನ್ನು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ 112 ಮಹಿಳಾ ಸಹಾಯವಾಣಿ ಮತ್ತು 22943225 ಗಳು ಕಾರ್ಯಾಚರಿಸುತ್ತಿವೆ. ಪ್ರತಿ ವರ್ಷ ಮಕ್ಕಳ ಸಹಾಯವಾಣಿಗೆ 11,000 ಕರೆಗಳು ಬರುತ್ತಿವೆ. ಅಲ್ಲದೆ ಮಹಿಳಾ ಸಹಾಯವಾಣಿಗೂ ದೊಡ್ಡ ಪ್ರಮಾಣದಲ್ಲಿ ಕರೆಗಳು ಬರುತ್ತಿವೆ ಎಂದು ವಿವರಣೆ ನೀಡಿದೆ.
ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಸಂಬಂಧವಾಗಿ 241 ಹೊಯ್ಸಳಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ತ್ವರಿತ ನೆರವುಗಳಿಗೆ ಸ್ಪಂದಿಸುತ್ತಿವೆ. ಅಲ್ಲದೆ ಬೆಂಗಳೂರು ನಗರದಲ್ಲಿ ಸೇಫ್ ಸಿಟಿ ಯೋಜನೆ ಅಡಿಯಲ್ಲಿ 7500 ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಜನಸಂದಣಿ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ 30 ಸೇಫ್ಟಿ ಐಲ್ಯಾಂಡ್ ಗಳನ್ನು ಗುರುತಿಸಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, 1050 ಮಹಿಳಾ ಹೆಲ್ಪ್ ಡೆಸ್ಕ್ ಗಳು ದಿನ 24 ಗಂಟೆ ಕರ್ತವ್ಯ ನಿರ್ವಹಣೆ ಮಾಡುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕುರಿತಾಗಿ ವಿಧಾನಪರಿಷತ್ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಅವರು ಪ್ರಶ್ನೆ ಕೇಳಿದ್ದರು. ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಇಲಾಖೆ ಈ ವಿವರವಾದ ಉತ್ತರವನ್ನು ನೀಡಿದೆ.















Comments