ರೈತ ಹೋರಾಟಕ್ಕೆ 1,000 ದಿನ : ನಟ ಪ್ರಕಾಶ್ ರಾಯ್ ಬೆಂಬಲ
- Ananthamurthy m Hegde
- Dec 30, 2024
- 1 min read

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ)ಗೆ ಭೂ ಸ್ವಾಧೀನ ಪ್ರಕ್ರಿಯೆ ಖಂಡಿಸಿ ಕಳೆದ ಮೂರು ವರ್ಷಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 30ರಂದು ಸೋಮವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದರು.
ರಾಜ್ಯ ಸರಕಾರದ ವಿರುದ್ಧ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 1,000 ದಿನ ಪೂರೈಸಿದ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಸಮಾವೇಶಕ್ಕೆ ನಟ ಪ್ರಕಾಶ್ ರೈ ಆಗಮಿಸಿ ರೈತರಿಗೆ ಬೆಂಬಲ ಸೂಚಿಸಿದರು.
ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಟ ಪ್ರಕಾಶ್ ರೈ ಹೋರಾಟದ ವೇದಿಕೆ ಏರಿದರು. ರೈತರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ಕೂಡ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಜನ ರೈತರು, ಮಹಿಳೆಯರು ಭಾಗಿಯಾಗಿದ್ದಾರೆ.
ರಾಜ್ಯ ಸರ್ಕಾರ ಬಲವಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಆಗ್ರಹಿಸಿ ರೈತರು ಕಳೆದ ಕೆಲವು ವರ್ಷಗಳಿಂದಲೇ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ಅನಿರ್ದಿಷ್ಟಾವಧಿ ಪ್ರತಿಭಟನೆ 1,000 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 30ರಂದು ಸೋಮವಾರ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಎರಡನೇ ಹಂತದಲ್ಲಿ 13 ಹಳ್ಳಿಗಳ 1,777 ಎಕರೆ ಭೂಮಿಯನ್ನ ಸ್ವಾಧೀನಕ್ಕೆ ಮುಂದಾಗಿದೆ. ಆದರೆ ತಮ್ಮ ಜಮೀನನ್ನು ಸ್ವಾಧೀನ ಮಾಡಬಾರದು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈವರೆಗೆ ಪ್ರತಿಭಟನಾ ಸ್ಥಳಕ್ಕೆ ಸಾಕಷ್ಟು ರಾಜಕೀಯ ಮುಖಂಡರು ಭೇಟಿ ನೀಡಿದ್ದರು. ಅಲ್ಲದೇ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಕಳೆದ ವಾರ ಸಿಎಂ ನೇತೃತ್ವದಲ್ಲಿ ಸಭೆ ನಡೆದಿತ್ತು. ಆದಷ್ಟು ಬೇಗ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಸಿಎಂ ಭರವಸೆ ನೀಡಿದ್ದರು. ಹಾಗಾಗಿ, 1000ನೇ ದಿನದ ಹೋರಾಟದ ಅಂಗವಾಗಿ ಬೃಹತ್ ಸಮಾವೇಶಕ್ಕೆ ರೈತರು ಕರೆ ನೀಡಿದ್ದರು.
ಚನ್ನರಾಯಪಟ್ಟಣ ಹೋರಾಟವನ್ನು ಕಳೆದ 1000 ದಿನದಿಂದ ವಿಭಿನ್ನವಾಗಿ ನಡೆಸಲಾಗುತ್ತಿದೆ. ಈ ಹೋರಾಟದ ಭಾಗವಾಗಿ ಉಪವಾಸ, ಗಣೇಶೋತ್ಸವವನ್ನು ಆಚರಿಸಲಾಗಿತ್ತು. ಜತೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಹೋರಾಟ ನಡೆಸಲಾಗಿತ್ತು. ಹೊಸದಿಲ್ಲಿ ಸೇರಿದಂತೆ ನಾನಾ ಭಾಗಗಳ ರೈತ ಮುಖಂಡರು ಕೂಡ ಈ ಹೋರಾಟಕ್ಕೆ ಕೈಜೋಡಿಸಿದ್ದರು. ಜತೆಗೆ ಈ ಭಾಗದ ರೈತರು ಏನೇಯಾದರೂ ಕೂಡ ಕೃಷಿ ಭೂಮಿ ಬಿಡುವುದಿಲ್ಲ ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಇದಕ್ಕೆ ಬೆಂಬಲ ವ್ಯಕ್ತವಾಗಿದೆ.















Comments