ರಸ್ತೆ ಅಪಘಾತದಲ್ಲಿ ಹುತಾತ್ಮರಾದ ಕರ್ನಾಟಕದ ಮೂವರು ಯೋಧರು
- Ananthamurthy m Hegde
- Dec 26, 2024
- 1 min read

ಬೆಳಗಾವಿ: ಜಮ್ಮು-ಕಾಶ್ಮೀರದ ಪೂಂಛ್‌ನಲ್ಲಿ ಸಂಭವಿಸಿದ ಸೇನಾ ವಾಹನ ಭೀಕರ ಅಪಘಾತದಲ್ಲಿ ಹುತಾತ್ಮರಾಗಿದ್ದ ಕರ್ನಾಟಕದ ಮೂವರು ವೀರ ಯೋಧರ ಪಾರ್ಥಿವ ಶರೀರ ಇಂದು ರಾಜ್ಯಕ್ಕೆ ಆಗಮಿಸಿದೆ.
ಬೆಳಗಾವಿಯ ಇಬ್ಬರು ಯೋಧರ ಮೃತದೇಹ ಬೆಳಗಾವಿಗೆ ಆಗಮಿಸಿದ್ದು, ಉಡುಪಿಯ ಓರ್ವ ಯೋಧನ ಮೃತದೇಹವನ್ನು ಕುಂದಾಪುರದ ಅವರ ಹುಟ್ಟೂರಿಗೆ ರವಾನೆ ಮಾಡಲಾಗಿದೆ. ಇಂದು ಹುತಾತ್ಮ ಯೋಧರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಯೋಧ ದಯಾನಂದ ತಿರಕಣ್ಣವರ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಯೋಧ ಮಹೇಶ ಮರಿಗೌಡರ ಈ ಇಬ್ಬರು ಹುತಾತ್ಮ ಯೋಧರ ಅಂತ್ಯಕ್ರಿಯೆಗೂ ಮುನ್ನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂಎಲ್ಐಆರ್‌ಸಿ ಸೆಂಟರ್‌ಗೆ ತೆರಳಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಚಿವರಾದ ಎಚ್ ಸಿ ಮಹಾದೇವಪ್ಪ, ಶಾಸಕ ಸಿ ಎಸ್ ನಾಡಗೌಡ, ಅಶೋಕ ಪಟ್ಟಣ, ಡಿಸಿ ಮಹಮ್ಮದ್ ರೋಷನ್ ಕೂಡ ಇದ್ದರು.
ಎಂಎಲ್‌ಐಆರ್‌ಸಿಯ ಬ್ರಿಗೇಡಿಯರ್ ಜಯದೀಪ ಮುಖರ್ಜಿ ಮತ್ತು ಕರ್ನಲ್ ಅರ್ಪಿತ್ ತಾಪಾ ಸಮ್ಮುಖದಲ್ಲಿ ಸೇನಾ ಸಿಬ್ಬಂದಿಯಿಂದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಯೋಧ ದಯಾನಂದ ತಿರಕಣ್ಣವರ್ ಅವರ ಮೃತ ದೇಹಕ್ಕೆ ಪುತ್ರಿ ವೈಷ್ಣವ, ಪುತ್ರ ಗಣೇಶ್ ಗೌರವ ಸಲ್ಲಿಸಿದರು.
ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರು
ನಾಲ್ಕು ಜನ ಯೋಧರು ರಸ್ತೆ ಅಪಘಾತದಲ್ಲಿ ದಯಾನಂದ, ಧರ್ಮರಾಜ್, ಮಹೇಶ, ಅನುಪ್ ಪೂಜಾರಿ ಮೃತಪಟ್ಟಿದ್ದಾರೆ. ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಿ ಎಂದು ಪ್ರಾರ್ಥನೆ ಮಾಡ್ತೀನಿ. ಸರ್ಕಾರದಿಂದ ಏನು ಪರಿಹಾರ ಕೊಡಬೇಕು ಅದನ್ನು ಮಾಡ್ತೀವಿ. ಅಪಘಾತದಲ್ಲಿ ಮೃತಪಟ್ಟಿದ್ದು, ದೇಶಕ್ಕೆ ನಷ್ಟ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಕಲ ಗೌರವದೊಂದಿಗೆ ಯೋಧರ ಪಾರ್ಥಿವ ಶರೀರವನ್ನುಊರಿನವರು ಬರಮಾಡಿಕೊಂಡರು.















Comments