ವೈದ್ಯರ ಅಜಾಗರೂಕತೆಯಿಂದ ಗರ್ಭಿಣಿ ಸಾವು
- Ananthamurthy m Hegde
- Nov 10, 2024
- 1 min read
ಸಿದ್ದಾಪುರ: ಇಲ್ಲಿನ ತಾಲೂಕ ಸರಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೋರ್ವಳು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷವೇ ಕಾರಣವೆಂದು ಆರೋಪಿಸಿ ತಾಲೂಕಿನ ನೂರಾರು ಜನ ಸಿದ್ದಾಪುರದ ತಾಲೂಕಾ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು. ಸ್ತ್ರೀರೋಗ ತಜ್ಞ ರವಿರಾಜ್ ಶೇಟ್ ಅವರನ್ನು ವಜಾಗೊಳಿಸಿ ಜೈಲಿಗೆ ಕಳುಹಿಸುವಂತೆ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕೋಣೆಗದ್ದೆಯ ಜ್ಯೋತಿ ರವಿ ನಾಯ್ಕ ನಾಲ್ಕು ದಿನಗಳ ಹಿಂದೆ ಸಿದ್ದಾಪುರದ ತಾಲೂಕಾ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದು, ಸ್ತ್ರೀರೋಗ ತಜ್ಞ ಡಾ. ರವಿರಾಜ ಶೇಟ್ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಿಧನಳಾಗಿದ್ದಾಳೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಿನ ಸಾವಿರಾರು ಜನ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಶಿವಮೊಗ್ಗದಿಂದ ಬಂದ ಮೃತದೇಹವನ್ನು ಆಸ್ಪತ್ರೆಯಲ್ಲಿಟ್ಟು ರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಬಿ.ವಿ., ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ., ಡಿ.ಎಸ್.ಪಿ ಕೆ.ಎಲ್.ಗಣೇಶ್, ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಮತ್ತಿತರರು ಭೇಟಿ ನೀಡಿ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಕ್ಷಣ ಮೇಲಾಧಿಕಾರಿಗೆ ಶಿಫಾರಸ್ಸು ಮಾಡುತ್ತೇವೆ. ಕುಟುಂಬದ ಸದಸ್ಯರ ಜತೆಗೆ ಮಾತನಾಡಿ ನ್ಯಾಯ ಒದಗಿಸಲು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ಡಿ ಎಚ್ ಒ,ಎ ಸಿ, ತಹಸೀಲ್ದಾರ್,ಟಿ ಎಚ್ ಒ ಮತ್ತಿತರರ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.














Comments