ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವು
- Ananthamurthy m Hegde
- Dec 22, 2024
- 1 min read

ಮೈಸೂರು: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನ ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬಾಲಕಿಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಎಕ್ಸ್ ರೇ, ಸ್ಕ್ಯಾನ್ ಏನೂ ಮಾಡದೆ ಏಕಾಏಕಿ ಆಪರೇಷನ್ ಮಾಡಿ ಮಗುವಿನ ಸಾವಿಗೆ ವೈದ್ಯರು ಕಾರಣರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಶಾರದಾದೇವಿ ನಗರದ ನಿವಾಸಿಯಾಗಿದ್ದ 14 ವರ್ಷದ ಲಕ್ಷ್ಮಿ ಮೃತಪಟ್ಟಿರುವ ಬಾಲಕಿ. ಹೊಟ್ಟೆ ನೋವಿನಿಂದ ಡಿ.19ರಂದು ಜನತಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. 20 ರಂದು ಆಪರೇಷನ್ ಮಾಡಿದ ಬಳಿಕ ಡಿ.21 ರಂದು ಮೌರ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಧಿಕ ಪ್ರಮಾಣದಲ್ಲಿ ಅನೆಸ್ತೇಶಿಯ ನೀಡಿದ ಪರಿಣಾಮ ಇಂದು ಯುವತಿ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಎಕ್ಸ್ ರೇ, ಸ್ಕ್ಯಾನ್ ಮಾಡದೆ ಏಕಾಏಕಿ ಆಪರೇಷನ್
ಹೊಟ್ಟೆ ನೋವು ಎಂದು ಹೇಳಿದ್ದಕ್ಕೆ ವೈದ್ಯರು ಎಕ್ಸ್ ರೇ, ಸ್ಕ್ಯಾನ್ ಮಾಡದೆ ಏಕಾಏಕಿ ಆಪರೇಷನ್ ಮಾಡಿದ್ದಾರೆ. ಸರಿಯಾದ ಚಿಕಿತ್ಸೆ ನೀಡದೇ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ತಮ್ಮ ಮಗಳು ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಮುಗಿಲುಮುಟ್ಟಿದ ಪೋಷಕರ ಆಕ್ರಂದನ
ಯುವತಿ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನತಾ ನಗರದ ಆಸ್ಪತ್ರೆ ಮುಂದೆ ಬಾಲಕಿ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರು ಹೇಳಿದ್ದೇನು ?
ನಮ್ಮ ಆಸ್ಪತ್ರೆಯಿಂದ ಯಾವುದೇ ಎಡವಟ್ಟು ಆಗಿಲ್ಲ. ಯುವತಿಯ ಕಂಡೀಶನ್ ಕ್ರಿಟಿಕಲ್ ಇತ್ತು ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಾವು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.















Comments