ವೈದ್ಯರ ಯಡವಟ್ಟಿನಿಂದ ಬಾಣಂತಿ ಸಾವು !
- Ananthamurthy m Hegde
- Dec 23, 2024
- 1 min read

ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ದುರ್ಮರಣ ಮುಂದುವರೆದಿದೆ. ಬಳ್ಳಾರಿ, ಬೆಳಗಾವಿ ಬೆನ್ನಲ್ಲೇ ಬೆಂಗಳೂರಲ್ಲೂ ಬಾಣಂತಿ ಮೃತಪಟ್ಟಿದ್ದಾರೆ. ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ ಎಂಬುವವರು ನಾಗರಾಬಾವಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದ ಅನುಷಾ ಆಸ್ಪತ್ರೆಯವರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹೊಟ್ಟೆಯಲ್ಲಿ ಕಲ್ಲಿದೆ ಅಂತೇಳಿ ಆಪರೇಷನ್
ಚಿಕ್ಕಮಗಳೂರಿನ ಕಡೂರು ತಾಲೂಕಿನ ಗರ್ಜೆ ಗ್ರಾಮದವರಾದ ಅನುಷಾಗೆ ತರೀಕೆರೆಯ ರಾಜ್ ನರ್ಸಿಂಗ್ ಹೋಮ್‌ನಲ್ಲಿ ನಾರ್ಮಲ್ ಡೆಲಿವರಿ ಆಗಿತ್ತು. ಡೆಲಿವರಿಗೂ ಮುನ್ನ ಮಾಡಿದ ಸ್ಕ್ಯಾನಿಂಗ್ನಲ್ಲಿ ಹೊಟ್ಟೆಯಲ್ಲಿ ಸ್ಟೋನ್ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದರು. ಅದೇ ಸ್ಕ್ಯಾನಿಂಗ್ ರಿಪೋರ್ಟ್ ಆಧಾರದ ಮೇಲೆ ಡೆಲಿವರಿಯಾದ ಒಂದೇ ತಿಂಗಳಿಗೆ ಆಪರೇಷನ್ ಮಾಡಲಾಯಿತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದ್ದರು.
ವೈದ್ಯರು ಯಡವಟ್ಟು ಮಾಡಿದ್ರಾ?
ಈ ವೇಳೆ ವೈದ್ಯರು ಯಡವಟ್ಟು ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಆಪರೇಷನ್ ವೇಳೆ ಕರುಳಿಗೆ ಡ್ಯಾಮೇಜ್ ಮಾಡಿದ್ದಾರಂತೆ. ಈ ವಿಷಯವನ್ನು ಮುಚ್ಚಿಟ್ಟು ಡಿಸ್ಚಾರ್ಜ್ ಮಾಡಿದ್ದರಂತೆ. ಆಪರೇಷನ್ ಬಳಿಕ ಮನೆಗೆ ಬಂದಾಗ ಅನುಷಾ ಅವರ ಕೈ-ಕಾಲುಗಳಲ್ಲಿ ಊತ ಕಂಡು ಬಂದಿದೆ. ಮತ್ತೆ ಆಸ್ಪತ್ರೆಗೆ ಹೋಗಿ ತೋರಿಸಿದಾಗ ನಾರ್ಮಲ್ ಇದೆ. ಏನೂ ಸಮಸ್ಯೆ ಇಲ್ಲವೆಂದ ವೈದ್ಯರು ತಿಳಿಸಿದ್ದಾರೆ.
ಮತ್ತೆ ಶಿವಮೊಗ್ಗದ ಸ್ಥಳೀಯ ಆಸ್ಪತ್ರೆಗೆ ಹೋದಾಗ ಅನುಷಾಗೆ ಜಾಂಡೀಸ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಬೆಂಗಳೂರಿಗೆ ಕರೆ ತಂದ ಕುಟುಂಬಸ್ಥರು, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಅನುಷಾ ಸಾವನ್ನಪ್ಪಿದ್ದಾರೆ.
Comments