ವಿಶ್ವ ಚಾಂಪಿಯನ್ ಗುಕೇಶ್‌ರನ್ನು ಭೇಟಿ ಮಾಡಿದ ಮೋದಿ
- Ananthamurthy m Hegde
- Dec 29, 2024
- 1 min read

ಡಿ.ಗುಕೇಶ್ ಭಾರತದ ಚೆಸ್ ಲೋಕದಲ್ಲಿ ಪ್ರಜ್ವಲಿಸುತ್ತಿರುವ ಹೊಸ ತಾರೆ. ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿರುವ ಡಿ.ಗುಕೇಶ್ ಅವರಿಗೆ ಜಗತ್ತಿನಾದ್ಯಂತ ಪ್ರಶಂಸೆಗಳು ಸುರಿದು ಬಂದಿದೆ. ಶನಿವಾರ ಡಿ.ಗುಕೇಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡಿರುವ 18ರ ಹರೆಯದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಅವರು ಪ್ರಧಾನಿ ಮೋದಿಯವರಿಗೆ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದರು.
ಗುಕೇಶ್ ಅವರನ್ನು ಶ್ಲಾಘಿಸಿದ ಮೋದಿ
ಈ ಸಂದರ್ಭದಲ್ಲಿ ಗುಕೇಶ್ ಅವರು ಪ್ರಧಾನಿ ಮೋದಿ ಅವರ ಜೊತೆಗೆ ತಾವು 11 ವರ್ಷದವರಿದ್ದಾಗ ಚೆಸ್ ಚಾಂಪಿಯನ್ ಆಗುವ ಕನಸು ಕಂಡಿದ್ದನ್ನು ನೆನಪಿಸಿಕೊಂಡರು. ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿರುವ ಗುಕೇಶ್ ಅವರನ್ನು ಪ್ರಧಾನಿ ಮೋದಿಯವರು ಮುಕ್ತ ಕಂಠದಿಂದ ಶ್ಲಾಘಿಸಿದರು. ಗುಕೇಶ್ ಅವರ ಉನ್ನತ ಪಯಣವು ಅಸಾಧಾರಣವಾಗಿದೆ. ಡಿಸೆಂಬರ್ 12 ರಂದು ಅವರು ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಕೇವಲ 18 ವರ್ಷಗಳಲ್ಲಿ ಈ ಸಾಧನೆ ಮಾಡುವ ಮೂಲಕ ಗುಕೇಶ್ ಅವರು ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರ ದಾಖಲೆಯನ್ನು ಮುರಿದಿದ್ದಾರೆ. ಗ್ಯಾರಿ ಅವರು ಅವರು 1985 ರಲ್ಲಿ 22 ನೇ ವಯಸ್ಸಿನಲ್ಲಿ ಚಾಂಪಿಯನ್ ಆಗಿದ್ದರು. ಇನ್ನೂ ಈ ಸಾಧನೆ ಮಾಡುವ ಮೂಲಕ ಭಾರತದ ವಿಶ್ವನಾಥನ್ ಆನಂದ್ ನಂತರ ವಿಶ್ವ ಚೆಸ್ ಚಾಂಪಿಯನ್ ಆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಡಿ. ಗುಕೇಶ್ ಭೇಟಿ ಬಳಿಕ ಎಕ್ಸ್ ಮೂಲಕ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿಯವರು, ನಾನು ಇತ್ತೀಚಿನ ಕೆಲವು ವರ್ಷಗಳಿಂದ ಅವರೊಂದಿಗೆ ನಿಕಟವಾಗಿ ಸಂವಹನ ನಡೆಸುತ್ತಿದ್ದೇನೆ ಮತ್ತು ಆತನ ಸಾಧನೆ ಬಗ್ಗೆ ಹೆಮ್ಮೆ ಅನಿಸುತ್ತದೆ. ಅವರ ಆತ್ಮವಿಶ್ವಾಸ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ವಾಸ್ತವವಾಗಿ ನೋಡುವುದಾದರೆ, ಕೆಲವು ವರ್ಷಗಳ ಹಿಂದೆ ಅವರು ಕಿರಿಯ ವಿಶ್ವ ಚಾಂಪಿಯನ್ ಆಗುತ್ತೇನೆ ಎಂದು ಹೇಳಿದ್ದ ವೀಡಿಯೊವನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ನರೇಂದ್ರ ಮೋದಿಯವರು ಹೇಳಿದರು .
Comments