ವಿಶ್ವದರ್ಶನ ಸಂಭ್ರಮ ಸಂಪನ್ನ : ಸಾಧನೆಗೈದ ವಿದ್ಯಾರ್ಥಿಗಳಿಗೆ ಪುರಸ್ಕಾರ
- Ananthamurthy m Hegde
- Dec 21, 2024
- 1 min read
ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ಶನಿವಾರ ವಿಶ್ವದರ್ಶನ ಸಂಭ್ರಮ-2024 ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ ಹೊಸ ಶಿಕ್ಷಣ ನೀತಿಯು ಬಾಲಕ, ಪಾಲಕ ಹಾಗೂ ಶಿಕ್ಷಕ ಸಮೂಹದಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಶಾಸಕ ವಿ.ಎಸ್.ಪಾಟೀಲ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಾಲೂಕಿನ ವಿದ್ಯಾರ್ಥಿಗಳು ಹೆಸರು ಮಾಡಲಿ ಎಂಬ ಕಾರಣಕ್ಕೆ ಪ್ರಾರಂಭವಾದ ಸಂಸ್ಥೆಯು ಇಂದಿಗೂ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಹಣಕ್ಕಿಂತ ವಿದ್ಯಾರ್ಥಿಗಳ ಭವಿಷ್ಯವೇ ಸಂಸ್ಥೆಗೆ ಮುಖ್ಯ ಎಂದರು.
ಎಂ.ಎಲ್.ಸಿ ಶಾಂತಾರಾಮ ಸಿದ್ದಿ ಮಾತನಾಡಿ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ವ್ಯಕ್ತಿ ನಿರ್ಮಾಣ ಮಾಡುವ ತಾಣ ಇದಾಗಿದೆ. ವಿದ್ಯಾರ್ಥಿಗಳು ಎಲ್ಲವನ್ನೂ ಸಮತೂಗಿಸಿ ಕೊಂಡುಹೋಗುವಂತೆ ಆಗಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಎಲ್ಲರ ಸಹಕಾರದಿಂದ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಬರುವ ಶೈಕ್ಷಣಿಕ ವರ್ಷದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯನ್ನು ಒಳಗೊಂಡ ಪದವಿ ವಿದ್ಯಾಲಯ ಆರಂಭಿಸುತ್ತಿದ್ದೇವೆ ಎಂದರು .
ಈ ಸಂದರ್ಭದಲ್ಲಿ ಎಂ.ಎಲ್.ಸಿ ಶಾಂತಾರಾಮ ಸಿದ್ದಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ, ವಿದ್ಯಾರ್ಥಿಗಳ ಕೈ ಬರಹ ಪತ್ರಿಕೆ ಅನಾವರಣಗೊಳಿಸಿದರು. ವಿಶ್ವದರ್ಶನ ಶಿಕ್ಷಣ ಸಮೂಹದ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ, ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆ ಅಧ್ಯಕ್ಷ ಡಿ. ಶಂಕರ ಭಟ್ಟ ಮಾತನಾಡಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಡಗುಂದಿ ಪ್ರೌಢಶಾಲೆಯ ಶಿಕ್ಷಕ ನವೀನ ಕುಮಾರ ಎ ಜಿ ಮತ್ತು ಯಲ್ಲಾಪುರದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಖೈರುನ್ ಶೇಖ್ ಅವರನ್ನು ಗೌರವಿಸಲಾಯಿತು. ವಿಶ್ವದರ್ಶನ ಶಿಕ್ಷಣ ಸಮೂಹದ ವಿವಿಧ ಅಂಗ ಸಂಸ್ಥೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಎಲ್.ಎಸ್.ಎಂ.ಪಿ. ಸೊಸೈಟಿ ಅಧ್ಯಕ್ಷ, ನಾಗರಾಜ ಕವಡಿಕೆರೆ, ಪ್ರಮುಖರಾದ ನರಸಿಂಹಮೂರ್ತಿ ಭಟ್ಟ ಕೋಣೆಮನೆ, ರಘುನಂದನ ಭಟ್ಟ, ಪ್ರಸಾದ ಹೆಗಡೆ, ಗಣಪತಿ ಮಾನಿಗದ್ದೆ, ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಉಪಸ್ಥಿತರಿದ್ದರು.
ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್ ಎಲ್ ಭಟ್ಟ ವರದಿ ವಾಚಿಸಿದರು. ಬಿಇಡಿ ಕಾಲೇಜಿನ ಉಪನ್ಯಾಸಕಿ ವೀಣಾ ಭಾಗ್ವತ ನಿರ್ವಹಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವಂದಿಸಿದರು.












Comments