top of page

ಶೈಕ್ಷಣಿಕ ಪ್ರವಾಸ ವೇಳೆ ವಿದ್ಯಾರ್ಥಿ ಮೃತ : ಆರು ಶಿಕ್ಷಕರು ಅಮಾನತು

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read

ಭಟ್ಕಳ: ಶೈಕ್ಷಣಿಕ ಪ್ರವಾಸದ ವೇಳೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ವಿದ್ಯಾರ್ಥಿ ಭಟ್ಕಳದಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಬಾರಿ ಮುಖ್ಯ ಶಿಕ್ಷಕರನ್ನು ಸೇರಿ ಒಟ್ಟು ಆರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಡಿ.18ರಿಂದ 21ರ ತನಕ ಎರಡು ಬಸ್‌ಗಳಲ್ಲಿ 100 ಜನ ವಿದ್ಯಾರ್ಥಿಗಳು, 11 ಶಿಕ್ಷಕರು ಪ್ರವಾಸಕ್ಕೆ ತೆರಳಲು ಇಲಾಖೆಯಿಂದ ಅನುಮತಿ ಪಡೆದಿದ್ದರು. ಆದರೆ, ಪ್ರವಾಸಕ್ಕೆ ತೆರಳುವಾಗ 13 ಜನ ಶಿಕ್ಷಕರು ಮತ್ತು ಇಬ್ಬರು ಅಡುಗೆ ಸಿಬ್ಬಂದಿಯನ್ನೂ ಕರೆದುಕೊಂಡು ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ತೆರಳಿದ್ದಾಗ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ಹರಿಜನ ರಾತ್ರಿ ಸಮಯದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾನೆ.

ಈ ಘಟನೆ ಮಗುವಿನ ಪೋಷಕರ ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಿರುಪಾದಿ ಹರಿಜನ ಸಾವಿಗೆ ಶಿಕ್ಷಕರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಯ ಪೋಷಕರು ಭಟ್ಕಳದಲ್ಲಿ ಪ್ರತಿಭಟನೆ ನಡೆಸಿದ್ದರು. ಕಳೆದ ವಾರವಷ್ಟೇ ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದರು. ಈಗ ಮತ್ತೊಬ್ಬ ವಿದ್ಯಾರ್ಥಿ ಬಲಿಯಾಗಿದ್ದು ಪೋಷಕರ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ.

ಆದ್ದರಿಂದ ಪ್ರಭಾರ ಮುಖ್ಯ ಗುರು ಸೇರಿದಂತೆ ಆರು ಜನ ಶಿಕ್ಷಕರನ್ನು ಅಮಾನತು ಮಾಡುವಂತೆ ಡಿಡಿಪಿಐ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ. ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಪೂರ್ವದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಇಲಾಖೆ ವಿವರವಾಗಿ ಸುತ್ತೋಲೆ ಹೊರಡಿಸಿ ಆದೇಶ ಜಾರಿ ಮಾಡಿದ ಶೈಕ್ಷಣಿಕ ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರ ಮೇಲಿರುತ್ತದೆ. ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕ ಹನುಮೇಶ ಬೆಲ್ಲದ, ಸಹ ಶಿಕ್ಷಕರಾದ ಶಿವಕುಮಾರ ಅವಸಂಗರದ, ನಾಗರಾಜ ಶೆಟ್ಟ‌ರ್, ಅಮರೇಶ ಬಳ್ಳಾರಿ, ಈರಮ್ಮ ಬಡಿಗೇರ ಮತ್ತು ಪದ್ಮಾವತಿ ಪವಾರ ಅವರನ್ನು ಅಮಾನತು ಮಾಡಲಾಗಿದೆ.

Comments


Top Stories

bottom of page