ಶಿರಸಿ : ಬೆಳೆ ಕಟಾವಿಗೆ ಮಳೆ ವಿಗ್ನ
- Oct 21, 2024
- 1 min read
Updated: Oct 22, 2024
ಶಿರಸಿ: ಕಳೆದೆರಡು ವಾರದಿಂದ ಆಗಾಗ ಸುರಿಯುತ್ತಿರುವ ಮಳೆಗೆ ಮೆಕ್ಕೆಜೋಳ ಕಟಾವಿಗೆ ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕಟಾವು ಮಾಡಿದ ರೈತರು ಬೆಳೆಗಳ ರಕ್ಷಣೆಗೋಸ್ಕರ ದಿನ ಬೆಳಗಾದರೆ ಒಣ ಹಾಕುವುದು, ಸಂಜೆಯಾಗುತ್ತಿದ್ದಂತೆ ತಾಡಪತ್ರಿ ಹೊದಿಸುವುದರಲ್ಲಿ ನಿರತರಾಗಿದ್ದಾರೆ.

ಮೇ ತಿಂಗಳ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದ ಮೆಕ್ಕಜೋಳ ಬೆಳೆ ಹುಲುಸಾಗಿ ಬೆಳೆದು ಇದೀಗ ಕಟಾವು ಹಂತ ತಲುಪಿದೆ. ಉತ್ತಮ ಇಳುವರಿ ಕೂಡ ಕಾಣಿಸಿಕೊಂಡಿದೆ. ಬನವಾಸಿ ಹೋಬಳಿಯ 500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಪ್ರಸ್ತುತ ಕಟಾವಿನ ಹಂಗಾಮಾಗಿದ್ದು, ರೈತರು ಬೆಳೆ ಕಟಾವು ಮಾಡಿ, ಒಣಗಿಸಿ ಮಾರಲು ಸಿದ್ಧತೆ ಆರಂಭಿಸಿದ್ದಾರೆ. ಕೂಲಿ ಕಾರ್ಮಿಕರ ಕೊರತೆಯ ಕಾರಣಕ್ಕೆ ಬಹುತೇಕ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ಆದರೆ ಮಳೆ ಕಡಿಮೆಯಾಗದ ಕಾರಣ ಮೆಕ್ಕೆಜೋಳ ಒಣಗಿಸುವುದೇ ಸವಾಲಾಗಿ ಪರಿಣಮಿಸಿದೆ.
ಕಳೆದ ವರ್ಷಗಳಲ್ಲಿ ಬನವಾಸಿ ಹೋಬಳಿ ಬರಗಾಲ ಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿತ್ತು. ಈ ಹಿನ್ನೆಲೆ ಭತ್ತ ಕೃಷಿಯಿಂದ ದೂರವಾದ ಕೆಲ ರೈತರು ಮೆಕ್ಕೆಜೋಳ ಬೆಳೆದಿದ್ದರು. ಪ್ರಸ್ತುತ ಮಳೆ ಹೆಚ್ಚಿರುವ ಕಾರಣಕ್ಕೆ ಬೆಳೆ ಕಟಾವಿಗೆ ಬಂದರೂ ಕಟಾವು ಮಾಡಲಾಗದ ಸ್ಥಿತಿ ಎದುರಿಸುತ್ತಿದ್ದಾರೆ.
'ಕಳೆದ ತಿಂಗಳು ಬಿದ್ದ ಮಹಾ ಮಳೆಗೆ ಬಹುತೇಕ ಬೆಳೆ ನಾಶವಾಗಿದೆ. ಶೇ20ರಷ್ಟು ಬೆಳೆ ಕೈಗೆ ಬಂದಿದೆ. ಅಷ್ಟೋ ಇಷ್ಟೋ ಬೆಳೆಯನ್ನಾದರೂ ರಕ್ಷಣೆ ಮಾಡಿಕೊಳ್ಳಬೇಕಾದರೆ ಈಗಲೂ ಮಳೆರಾಯನ ಕಾಟ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಪರ್ಯಾಯವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮೆಕ್ಕೆಜೋಳ ಬೆಳೆಗಾರರು ಬೀದಿಗೆ ಬೀಳಬೇಕಾಗುತ್ತದೆ' ಎಂಬುದು ಬೆಳೆಗಾರರ ಆತಂಕವಾಗಿದೆ.
'ಬಹುತೇಕ ರೈತರು ಬೆಳೆ ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕೆಲ ರೈತರು ಆಗಾಗ ಬರುವ ಬಿಸಿಲು ನಂಬಿ ಕಟಾವು ಮಾಡಿದ್ದಾರೆ. ಮಳೆ ಬರುವ ಮುನ್ಸೂಚನೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರೈತರು ಸಾವಿರಾರು ಖರ್ಚು ಮಾಡಿ ತಾವು ಬೆಳೆದ ಬೆಳೆಗಳ ರಕ್ಷಣೆಗಾಗಿ ತಾಡಪತ್ರಿಗಳನ್ನು ಖರೀದಿಸಿ ಹಿತ್ತಲಿನ ಖಣದಲ್ಲಿರುವ ರಾಶಿಗಳು, ಜಮೀನಿನಲ್ಲಿನ ಬಣವೆಗಳಿಗೆ ಹೊದಿಸುತ್ತಾರೆ. ಆದರೆ ಕಳ್ಳರು ರಾಶಿ, ಬಣವೆಗಳ ಮೇಲೆ ಹೊದಿಸಿದ್ದ ಏತನ್ಮಧ್ಯೆ ತಾಡಪತ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆತಂಕವನ್ನು ತಂದಿದೆ.
Commentaires