ಶಿರಸಿಯಲ್ಲಿ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ : 320ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
- Ananthamurthy m Hegde
- Nov 5, 2024
- 1 min read
ಶಿರಸಿ: ಚದುರಂಗವು ತಾಳ್ಮೆ, ಬುದ್ಧಿವಂತಿಕೆಯ ಆಟವಾಗಿದೆ. ಆಟದಲ್ಲಿ ಗೆದ್ದೆ ಎಂಬ ಹೆಮ್ಮೆ, ಸೋಲು ಎಂಬ ಕೊರಗು ಇರಬಾರದು. ಸೋಲು-ಗೆಲುವು ಸಮಾನವಾಗಿ ಸ್ವೀಕಾರ ಮಾಡುವ ಮನೋಭಾವ ನಮ್ಮದಾಗಲಿ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಶ್ರೀ ಮಾರಿಕಾಂಬಾ ಸರಕಾರಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಶಿರಸಿ ಶೈಕ್ಷಣಿಕವಾಗಿ ಮುಂದುವರೆದ ಪ್ರದೇಶ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಭಾಗ ಇದಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ಈ ಕ್ರೀಡಾಕೂಟದಲ್ಲಿ ಯಶಸ್ಸು ದೊರಕಲಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಾಧನೆಗೆ ಇಂದಿನ ನಿಮ್ಮ ಚದುರಂಗದ ಆಟ ಪೂರಕವಾಗಲಿ ಎಂದರು.
ಸಹಾಯಕ ಆಯುಕ್ತೆ ಕಾವ್ಯಾರಾಣಿ ಮಾತನಾಡಿ, ಆಟದಲ್ಲಿ ಸೋಲು-ಗೆಲುವು ಸಹಜ. ಆಟದ ಜೊತೆಗೆ ನಿರ್ಣಾಯಕ ನಿರ್ಣಯಕ್ಕೆ ಬದ್ಧರಾಗಿ ಆರೋಗ್ಯಕರ ವಾತಾವರಣದಲ್ಲಿ ಆಟ ನಡೆಯುವಂತೆ ಮಾಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಚದುರಂಗ ಎನ್ನುವುದು ಬುದ್ಧಿವಂತಿಕೆ ಪ್ರಧಾನವಾಗಿರುವ ಆಟವಾಗಿದೆ. ವಯಸ್ಸು, ಅದೃಷ್ಟವನ್ನು ಮೀರಿ ಪ್ರತಿಭೆಯೊಂದೇ ಮಾನದಂಡವಾಗಿರುವ ಆಟ ಇದಾಗಿದೆ. ಎಲ್ಲ ವಿದ್ಯಾರ್ಥಿಗಳು ಯುಕ್ತಿಯಿಂದ ಆಟವಾಡಿ ಎಂದು ಕರೆ ನೀಡಿದರು.
ಪಂದ್ಯಾವಳಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ೩೨೦ಕ್ಕೂ ಅಧಿಕ ಪದವಿಪೂರ್ವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಾಜಪ್ಪ ಕೆ.ಎಚ್, ಸತೀಶ ನಾಯ್ಕ, ವೀಕ್ಷಕರಾಗಿ ಸುಖೇಶ ಶೆಟ್ಟಿ, ತಿಪ್ಪೇಸ್ವಾಮಿ, ಗ್ರ‍್ಯಾಂಡ್ ಮಾಸ್ಟರ್ ಶ್ರೀಪಾದ, ನವೀನ ಸೇರಿದಂತೆ ಇನ್ನಿತರರು ಇದ್ದರು. ಶ್ರೀ ಮಾರಿಕಾಂಬಾ ಕಾಲೇಜಿನ ಮುಖ್ಯೋಧ್ಯಾಪಕ ಬಾಲಚಂದ್ರ ಹೆಗಡೆ ಸ್ವಾಗತಿಸಿದರು.
Comments