ಸಿ.ಟಿ ರವಿಗೆ ಜಾಮೀನು : ರಾಜಕೀಯ ಹೈಡ್ರಾಮಾಕ್ಕೆ ತೆರೆ
- Ananthamurthy m Hegde
- Dec 21, 2024
- 1 min read

ದಾವಣಗೆರೆ / ಬೆಂಗಳೂರು : ಒಂದು ದಿನದ ರಾತ್ರಿ ಹಗಲು ರಾಜಕೀಯ ಹೈಡ್ರಾಮಾದ ನಂತರ, ಬಿಜೆಪಿಯ ಶಾಸಕ ಸಿ.ಟಿ.ರವಿ, ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ಕೂಡಲೇ, ಅವರನ್ನು ಬಿಡುಗಡೆ ಮಾಡಬೇಕೆಂದು ಆದೇಶ ನೀಡುವ ಮೂಲಕ, ಚಳಿಗಾಲದ ಅಧಿವೇಶನದ ಕೊನೆಯ ದಿನದ ಪ್ರಸಂಗಕ್ಕೆ ತೆರೆ ಬಿದ್ದಿದೆ.
ಬೆಳಗಾವಿ ಐದನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ, ಶುಕ್ರವಾರ (ಡಿ 21) ಹೆಚ್ಚುವರಿ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು, ತೀರ್ಪನ್ನು ಮೂರು ಗಂಟೆಗೆ ಕಾಯ್ದಿರಿಸಿತ್ತು. ಆದರೆ, ತಕ್ಷಣದಿಂದಲೇ ಜಾರಿಗೆ ಬರುವಂತೆ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಆದೇಶದ ಬೆನ್ನಲ್ಲೇ, ರಸ್ತೆ ಮೂಲಕ, ಸಿ.ಟಿ.ರವಿಯವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಕಾರು ಹತ್ತಿಸಲಾಯಿತು.
ಪೊಲೀಸರ ವಾಹನದಲ್ಲಿ ಸಿ.ಟಿ.ರವಿಯವರನ್ನು ಕರೆದುಕೊಂಡು ಹೋಗುತ್ತಿದ್ದಾಗ, ಬಿಜೆಪಿ ನಾಯಕರು ಅದನ್ನು ಹಿಂಬಾಲಿಸಿದರು. ಈ ಮಧ್ಯೆ, ಕರ್ನಾಟಕ ಹೈಕೋರ್ಟಿನಲ್ಲೂ ಜಾಮೀನಿಗೆ ಅರ್ಜಿ ಸಲ್ಲಿಸಲಾಯಿತು. ತುರ್ತಾಗಿ ವಿಚಾರಣೆಗೆ ಅರ್ಜಿಯನ್ನು ಕೈಗೆತ್ತೆಕೊಂಡ ಕೋರ್ಟ್, ರವಿಗೆ ಜಾಮೀನು ಆದೇಶ ಹೊರಡಿಸಿತು.
ಕೂಡಲೇ, ಅವರನ್ನು ರಸ್ತೆ ಮಧ್ಯೆಯೇ ಬಿಡುಗಡೆಗೊಳಿಸಲಾಯಿತು. ನಂತರ, ಹಿಂಬಾಲಿಸಿಕೊಂಡು ಬರುತ್ತಿದ್ದ ನಾಯಕರ ಕಾರನ್ನು ಹತ್ತಿದ ಸಿ.ಟಿ.ರವಿ, ದಾವಣಗೆರೆಯ ಸರ್ಕ್ಯೂಟ್ ಹೌಸಿನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಅವರ ಜೊತೆ, ವಿಜಯೇಂದ್ರ, ಅಶೋಕ್, ಬಿ.ಪಿ.ಹರೀಶ್ ಮುಂತಾದ ನಾಯಕರಿದ್ದರು. ಸಿ.ಟಿ.ರವಿ ಬಂಧನದ ನಂತರ, ಬಿಡುಗಡೆಯವರೆಗೆ ಬಿಜೆಪಿ ನಾಯಕರು ಯಾವುದೇ ಭಿನ್ನಮತವಿಲ್ಲದೇ, ಅವರ ಬೆನ್ನಿಗೆ ನಿಂತಿದ್ದು ವಿಶೇಷ.
ತಮ್ಮ ಬಿಡುಗಡೆಯ ಆದೇಶ ಬರುತ್ತಿದ್ದಂತೆಯೇ ಸಿ.ಟಿ.ರವಿ, ಕೆಳಗಿನ ಸಂಸ್ಕೃತದ ಶ್ಲೋಕವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ :
ಸತ್ಯಮೇವ ಜಯತೇ ನಾನೃತಂ, ಧರ್ಮೋ ಹಿ ಶ್ರಯತೇ ಜನಾನ್।
ಸತ್ಯೇನ ಪಂಥಾ ವಿತತೋ ದೇವಯಾನಃ, ಯೇನಾಕ್ರಮಂತ್ಯೃಷಯೋ ಹ್ಯಾಪ್ತಕಾಮಾಃ।।
ಸತ್ಯಂ ವದ ಧರ್ಮಂ ಚರ
ಸಿ.ಟಿ.ರವಿಯವರ ಈ ಪೋಸ್ಟಿಗೆ ಸುಮಾರು ಐದು ಸಾವಿರ ಲೈಕ್ಸ್ ಬಂದಿದೆ, ಜೊತೆಗೆ, 750ಕ್ಕೂ ಹೆಚ್ಚು ಕಾಮೆಂಟುಗಳು ಬಂದಿವೆ. ಇನ್ನು ಎಕ್ಸ್ (ಟ್ವಿಟ್ಟರ್) ನಲ್ಲಿ ಹಾಕಲಾದ ಇದೇ ಪೋಸ್ಟ್ ಅನ್ನು ಸುಮಾರು 37 ಸಾವಿರ ಜನ ವೀಕ್ಷಿಸಿದ್ದಾರೆ.
Comments