ಸೇಡು ತೀರಿಸಿಕೊಂಡ ಭಾರತ : ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆ ಲಗ್ಗೆ
- Ananthamurthy m Hegde
- Mar 5
- 2 min read
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 4 ವಿಕೆಟ್ ಗಳ ಅಂತರದಲ್ಲಿ ಮಣಿಸಿತು. ಭಾರತದ ಪರ ವಿರಾಟ್ ಕೊಹ್ಲಿ 98 ಎಸೆತಗಳಲ್ಲಿ 5 ಬೌಂಡರಿ ಸಹಿತ 84 ರನ್ ಕಲೆಹಾಕಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ಆಸ್ಟ್ರೇಲಿಯಾ ನೀಡಿದ 265 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (28 ರನ್) ಮತ್ತು ಶುಭ್ ಮನ್ ಗಿಲ್ ಜೋಡಿ ಉತ್ತಮ ಆರಂಭ ಒದಗಿಸಿತು. ಮೊದಲ ವಿಕೆಟ್ ಗೆ ಈ ಜೋಡಿ 30 ರನ್ ಗಳ ಜೊತೆಯಾಟ ಆಡಿತು. ಆದರೆ ಗಿಲ್ ಕೇವಲ 8 ರನ್ ಗಳಿಸಿ ಡ್ವಾರ್ಶೂಸ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್ ಶರ್ಮಾ ಕೂಡ 28 ರನ್ ಗಳಿಸಿ ಭರ್ಜರಿ ಹೊಡೆತಕ್ಕೆ ಕೈಹಾಕಿ ಕೂಪರ್ ಕಾನೋಲಿ ಬೌಲಿಂಗ್ ನಲ್ಲಿ ಔಟಾದರು.
ಕೊಹ್ಲಿ-ಶ್ರೇಯಸ್ ಅಯ್ಯರ್ ಅಮೋಘ ಜೊತೆಯಾಟ
ಬಳಿಕ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಭಾರತ ತಂಡದ ರನ್ ಗಳಿಕೆಗೆ ವೇಗ ನೀಡಿದರು. ಈ ಜೋಡಿ 3ನೇ ವಿಕೆಟ್ ಗೆ 91 ರನ್ ಗಳ ಅಮೋಘ ಜೊತೆಯಾಟವಾಡಿತು. ಆದರೆ 45 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾದ ಆಡ್ಯಂ ಜಂಪಾ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಲೀನ್ ಬೌಲ್ಡ್ ಆದರು.
ಬಳಿಕ ಕೊಹ್ಲಿ ಜೊತೆಗೂಡಿದ ಅಕ್ಸರ್ ಪಟೇಲ್ 28 ರನ್ ಗಳಿಸಿ ಭರವಸೆ ಮೂಡಿಸಿದರಾದರೂ, ಅಕ್ಸರ್ ಕೂಡ ನಾಥನ್ ಎಲ್ಲಿಸ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಅಕ್ಸರ್ ಪಟೇಲ್ ಔಟ್ ಬಳಿಕ ತಂಡವನ್ನು ಗೆಲುವಿನತ ಸಾಗಿಸಿದ ವಿರಾಟ್ ಕೊಹ್ಲಿ 84 ರನ್ ಗಳಿಸಿದ್ದ ವೇಳೆ ಮತ್ತದೇ ಆ್ಯಡಂ ಜಂಪಾ ಬೌಲಿಂಗ್ ನಲ್ಲಿ ಸಿಕ್ಸರ್ ಗೆ ಮುಂದಾಗಿ ಡ್ವಾರ್ಶೂಸ್ ಗೆ ಕ್ಯಾಚ್ ನೀಡಿ ಔಟಾದರು. Advertisements
ಬಳಿಕ ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯ ಬಂದಷ್ಟೇ ವೇಗವಾಗಿ 28 ರನ್ ಗಳಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. ಆದರೆ ಮತ್ತೆ ದೊಡ್ಡ ಹೊಡೆತಕ್ಕೆ ಮುಂದಾಗಿ ಮ್ಯಾಕ್ಸ್ ವೆಲ್ ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ರವೀಂದ್ರ ಜಡೇಜಾ (2 ರನ್) ಮತ್ತು ಕೆಎಲ್ ರಾಹುಲ್ ಅಜೇಯ 42 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು.
ಅಂತಿಮವಾಗಿ ಭಾರತ 48.1 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿ 4 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
ಇನ್ನು ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ ಮತ್ತು ಆ್ಯಡಂ ಜಂಪಾ ತಲಾ 2 ವಿಕೆಟ್ ಪಡೆದರೆ, ಕೂಪರ್ ಕಾನೋಲಿ ಮತ್ತು ಡ್ವಾರ್ಶೂಸ್ ತಲಾ 1 ವಿಕೆಟ್ ಪಡೆದರು.
ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Opmerkingen