ಸಾಮಾನ್ಯ ಸಭೆಯಲ್ಲಿ ಭುಗಿಲೆದ್ದ ಅಸಮಾಧಾನ
- Ananthamurthy m Hegde
- Mar 14
- 1 min read
ಯಲ್ಲಾಪುರ: ಪಟ್ಟಣದ ಅಂಬೇಡ್ಕರ್ ಗಲ್ಲಿಯಲ್ಲಿ ಏ.14 ಅಂಬೇಡ್ಕರ್ ಜಯಂತಿಯೊಳಗೆ ಅಂಗನವಾಡಿ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿ ಸದಸ್ಯರಾದ ಶ್ಯಾಮಿಲಿ ಪಾಟಣಕರ್,ನಾಗರಾಜ ಅಂಕೋಲೆಕರ,ರವಿ ಪಾಟಣಕರ್ ಶುಕ್ರವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ವೇದಿಕೆಯ ಮುಂದೆ ಹೋಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಸದಸ್ಯರ ಮಾತನ್ನು ಮುಖ್ಯಾಧಿಕಾರಿ ಜೋಕ್ ಆಗಿ ತೆಗೆದುಕೊಳ್ಳುತ್ತಾರೆ. ಸದಸ್ಯರೆಂದರೆ ಅಧಿಕಾರಿಗಳಿಗೆ ಜೋಕರ್ ಆಗಿದ್ದೇವೆ ಎಂದು ಸದಸ್ಯೆ ಶ್ಯಾಮಲಿ ಪಾಟಣಕರ್ ಅಸಮಾಧಾನ ಹೊರಹಾಕಿದರು.
ಶನಿವಾರ ಶೆಡ್ ಕೆಡವಿ ಕಟ್ಟಡ ಆರಂಭಿಸಲಾಗುವುದು. ಎರಡು ತಿಂಗಳೊಳಗೆ ಕಟ್ಟಡ ಮುಗಿಸುವ ಭರವಸೆಯನ್ನು ಮುಖ್ಯಾಧಿಕಾರಿ ನೀಡಿದರು. ಕಾಮಗಾರಿ ಆರಂಭವಾಗದೇ ಇದ್ದಲ್ಲಿ ಅಂಗನವಾಡಿ ಮಕ್ಕಳನ್ನು ಪ.ಪಂ ಎದುರು ತಂದು ಪ್ರತಿಭಟನೆ ನಡೆಸಲಾಗುವುದೆಂದು ಸದಸ್ಯರು ಎಚ್ಚರಿಸುವ ಮೂಲಕ ಮೊದಲ ಪ್ರತಿಭಟನೆಗೆ ತೆರೆ ಎಳೆದರು.
ಅನೇಕ ಸದಸ್ಯರು ವಿವಿಧ ಸಮಸ್ಯೆಗಳನ್ನು ಉಲ್ಲೇಖಿಸಿ ಪ್ರಶ್ನಿಸಿದರು. ಸದಸ್ಯರ ಆಕ್ರೋಶಕ್ಕೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಮೌನವೇ ಉತ್ತರವಾಗಿತ್ತು. ಕೊನೆಗೆ ಆಡಳಿತ ಸದಸ್ಯರೇ ಮುಖ್ಯಾಧಿಕಾರಿ ಎದುರು ಧರಣಿ ಕುಳಿತು ಜಾತ್ರೆ ಲೆಕ್ಕಾಚಾರ ಇತ್ಯಾದಿಗಳ ಕುರಿತು ಪಟ್ಟು ಹಿಡಿದರು.
ಸಭೆಯ ನಡಾವಳಿಯಲ್ಲಿ 19 ವಿಷಯಗಳಿದ್ದರೂ ಮೊದಲ ವಿಷಯ ಚರ್ಚೆಗೆ ಬರುವ ಮುನ್ನವೇ 2 ತಾಸುಗಳ ಸಮಯವನ್ನು ಪ್ರತಿಭಟನೆ, ವಾಗ್ವಾದಗಳೆ ನುಂಗಿ ಹಾಕಿತು.
Comentários