ಸಿಲಿಂಡರ್ ಸ್ಪೋಟದಿಂದ ಇಬ್ಬರು ಅಯ್ಯಪ್ಪ ಮಾಲಧಿಕಾರಿಗಳ ಸಾವು : ಮೃತರ ಕುಟುಂಬಕ್ಕೆ ೫ ಲಕ್ಷ ಪರಿಹಾರ
- Ananthamurthy m Hegde
- Dec 26, 2024
- 1 min read

ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಉಣಕಲ್ ಹತ್ತಿರದ ಸಾಯಿ ನಗರದಲ್ಲಿ ಸೋಮವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡು 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಎಲ್ಲರಿಗೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಬ್ಬರು ಮಾಲಾಧಾರಿಗಳು ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತರನ್ನು ನಿಜಲಿಂಗಪ್ಪ ಬೇಪುರಿ(58) ಮತ್ತು ಸಂಜಯ ಸವದತ್ತಿ (20) ಎಂದು ಗುರುತಿಸಲಾಗಿದೆ. ಈ ಇಬ್ಬರಿಗೂ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬಸ್ಥರು ಸಚಿವ ಸಂತೋಷ್ ಲಾಡ್ ಎದುರು ಕಣ್ಣೀರು ಹಾಕಿದರು. ಅವರು ಅಹವಾಲು ಕೇಳಿದ ಸಚಿವರು ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದರು.
ನಂತರ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಲಾಗಿದೆ. ಹೀಗಾಗಿ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಕೊಡುತ್ತೇವೆ. ಅವರನ್ನು ಬದುಕಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಿದೆವು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಒಬ್ಬರನ್ನು ಹೊರತುಪಡಿಸಿ ಉಳಿದವರ ಸ್ಥಿತಿಯು ಗಂಭೀರವಾಗಿದೆ. ಅವರಿಗೆ ತಜ್ಞ ವೈದ್ಯರ ಮೂಲಕವೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಗಾಯಳುಗಳನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಶವಾಗಾರ ಬಳಿ ಹೈಡ್ರಾಮಾ
ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದ ಬಳಿ ಹೈಡ್ರಾಮಾ ನಡೆದ ಪ್ರಸಂಗವೂ ನಡೆಯಿತು. ಮೃತ ನಿಜಲಿಂಗಪ್ಪನ ಶವಕ್ಕಾಗಿ ಇಬ್ಬರ ಹೆಂಡಿರ ಮಧ್ಯೆ ಜಗಳ ನಡೆದಿದ್ದು, ನಿಜಲಿಂಗಪ್ಪನ ಮೊದಲ ಮತ್ತು ಎರಡನೇ ಹೆಂಡತಿಯ ಮಧ್ಯೆ ಶವಕ್ಕಾಗಿ ಜಗಳ ನಡೆಯಿತು. ತನ್ನ ಮನೆ ಬಳಿ ಪೂಜೆ ಮಾಡಲು ಮೊದಲು ಅವಕಾಶ ಮಾಡುವಂತೆ ಎರಡನೇ ಹೆಂಡತಿ ಶಾಂತಾ ಆಗ್ರಹಿಸಿ ಶವವನ್ನು ವಾಪಸ್ ಶವಾಗಾರಕ್ಕೆ ತಂದರು. ಅಲ್ಲದೇ ಆ ವೇಳೆ ಪೊಲೀಸರ ವಿರುದ್ಧ ಶಾಂತ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಮನೆಗೆ ಮೊದಲು ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ರಿ’. ಆದರೆ ಈಗ ಮೊದಲ ಹೆಂಡತಿ ಮನೆಗೆ ಕರೆದೊಯ್ಯುತ್ತಿದ್ದೀರಿ ಎಂದು ಪೊಲೀಸರ ಮೇಲೆ ಕಿಡಿಕಾರಿದ ಶಾಂತಾ, ನಿಜಲಿಂಗಪ್ಪ ಆಸ್ಪತ್ರೆ ಸೇರಿದಾಗ ಯಾರೂ ಬರಲಿಲ್ಲ. ಈಗ ಪರಿಹಾರ ಸಿಗುತ್ತೆ ಅಂತ ಮೊದಲ ಹೆಂಡತಿ ಬಂದಿದ್ದಾಳೆ. ಇದಕ್ಕೆ ನೀವೆಲ್ಲ ಅವಕಾಶ ಮಾಡಿಕೊಡುತ್ತಿದ್ದೀರಿ ಎಂದು ಕಿಡಿಕಾರಿದರು. ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದ ನಂತರ ಪರಿಸ್ಥಿತಿ ತಿಳಿಗೊಂಡಿತು. ನಂತರ ಶವವನ್ನು ತೆಗೆದುಕೊಂಡು ಹೋಗಲು ಶಾಂತ ಒಪ್ಪಿದರು.
Comments