top of page

ಸಾಲು ಸಾಲು ರಜೆ : ಕೆ.ಎಸ್.ಆರ್.ಟಿ.ಸಿಯಲ್ಲಿ ದಾಖಲೆ ಬುಕ್ಕಿಂಗ್

  • Writer: Ananthamurthy m Hegde
    Ananthamurthy m Hegde
  • Nov 5, 2024
  • 2 min read


ree

ದೀಪಾವಳಿ ಹಬ್ಬ ಮತ್ತು ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮತ್ತು ಆದಾಯದಲ್ಲಿ ಕೆಎಸ್‌ಆರ್‌ಟಿಸಿ ಹೊಸ ದಾಖಲೆ ಮಾಡಿದೆ. ಒಂದೇ ದಿನ ೮೫,೪೬೨ ಟಿಕೆಟ್‌ಗಳು ಬುಕ್ಕಿಂಗ್ ಆಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿAದ ವಿವಿಧ ನಗರಗಳಿಗೆ ಹೋಗುವ ಮತ್ತು ವಾಪಸ್ ಆಗುವ ಹೆಚ್ಚು ಟಿಕೆಟ್‌ಗಳು ಬುಕ್ ಆಗಿದ್ದು, ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ನಗರದಿಂದ ದಾವಣಗೆರೆ, ಮೈಸೂರು, ಹುಬ್ಬಳ್ಳಿ, ತಿರುಪತಿ, ಶಿವಮೊಗ್ಗ ಮತ್ತು ಕಲಬುರಗಿಗೆ ಹೆಚ್ಚಿನ ಟಿಕೆಟ್‌ಗಳು ಬುಕ್ ಆಗಿವೆ. ೨೦೦೬ರಲ್ಲಿ ಕೆಎಸ್‌ಆರ್‌ಟಿಸಿ ಅವತಾರ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಈ ಅಪ್ಲಿಕೇಶನ್ ಮೂಲಕ ಒಂದೇ ದಾಖಲೆಯ ಟಿಕೆಟ್‌ಗಳು ಬುಕ್ ಆಗಿವೆ. ಒಂದು ದಿನ ೬೭,೦೩೩ ಟಕೆಟ್ ಬುಕ್ ಆಗಿದ್ದು, ಸುಮಾರು ೪.೬೩ ಕೋಟಿ ರೂ. ಆದಾಯ ಬಂದಿದೆ.

ಈ ಅಪ್ಲಿಕೇಶನ್ ಬಿಡುಗಡೆ ಮಾಡಿದ ಬಳಿಕ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಒಂದೇ ದಿನ ಅಂದರೆ ನವೆಂಬರ್ ೩ರಂದು ೮೫,೪೬೨ ಟಿಕೆಟ್‌ಗಳು ಬುಕ್ ಆಗಿದ್ದು, ೫.೫೯ ಕೋಟಿ ರೂ. ಆದಾಯ ಬಂದಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಹೆಚ್ಚುವರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಓಡಿಸಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ನಗರಕ್ಕೆ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಓಡಿಸಿದೆ. ಅಕ್ಟೋಬರ್ ೩೦ರಂದು ೪೮೦ ಹೆಚ್ಚುವರಿ ಬಸ್‌ಗಳು ಸಂಚಾರ ನಡೆಸಿವೆ. ನವೆಂಬರ್ ೩ರಂದು ೬೪೩ ಹೆಚ್ಚುವರಿ ಬಸ್‌ಗಳು ಓಡಿವೆ.

ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ ೨೦೧೯ರ ದಸರಾ ಸಂದರ್ಭದಲ್ಲಿ ೬೧,೦೯೩ ಟಿಕೆಟ್‌ಗಳು ಆನ್‌ಲೈನ್ ಮೂಲಕ ಬುಕ್ ಆಗಿದ್ದವು. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಈ ಎಲ್ಲಾ ದಾಖಲೆಗಳನ್ನು ಸರಿಗಟ್ಟಲಾಗಿದೆ. ಜೂನ್ ೨೦೨೪ರಲ್ಲಿ ಕೆಎಸ್‌ಆರ್‌ಟಿಸಿ ಅಪ್‌ಡೇಟ್ ಆಗಿರುವ ೪.೦ ಅವತಾರ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು.

ಈ ಹೊಸ ಅಪ್ಲಿಕೇಶನ್ ಪ್ರಯಾಣಿಕ ಸ್ನೇಹಿಯಾಗಿದೆ. ಹಲವು ಹೊಸ ಫೀಚರ್‌ಗಳನ್ನು ಸೇರಿಸಲಾಗಿದೆ. ಬಸ್‌ಗಳ ಹುಡುಕಾಟ, ಪೇಮೆಂಟ್ ವಿಧಾನದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕ್ಯೂ ಆರ್ ಕೋಡ್ ಮೂಲಕವೂ ಟಿಕೆಟ್ ಬುಕ್ ಮಾಡಲು ಇದರಲ್ಲಿ ಅವಕಾಶವನ್ನು ನೀಡಲಾಗಿದೆ. ಬುಕ್ಕಿಂಗ್ ಖಾತ್ರಿ, ಬಸ್ ವಿಳಂಬ ಸೇರಿದಂತೆ ಇತರ ನೋಟಿಫಿಕೇಶನ್ ವಾಟ್ಸಪ್ ಮೂಲಕವೂ ಬರುವಂತೆ ಅಪ್‌ಡೇಟ್ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆನ್‌ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿ ನಾವು ಹೊಸ ದಾಖಲೆ ಬರೆದಿದ್ದೇವೆ. ನಮ್ಮ ವ್ಯವಸ್ಥೆ ಪ್ರಯಾಣಿಕ ಸ್ನೇಹಿಯಾಗಿದೆ. ಹೊಸದಾದ, ಪರಿಸರ ಸ್ನೇಹಿ ವ್ಯವಸ್ಥೆಯನ್ನು ನಾವು ಶೀಘ್ರದಲ್ಲಿಯೇ ಪರಿಚಯಿಸಲಿದ್ದೇವೆ. ಕಾಗದ ಬಳಕೆ ಕಡಿಮೆ ಮಾಡಲು ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯೂ ಬರಲಿದೆ ಎಂದು ಹೇಳಿದ್ದಾರೆ.

ಸಾಮಾನ್ಯ ಮತ್ತು ಕಾರ್ಪೊರೇಟ್ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಆರ್‌ಟಿಸಿ ಅವತಾರ್ ೪.೦ ಅಪ್ಲಿಕೇಶನ್ ಅನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಮುಂದಾಗಿದೆ. ಈ ಅಪ್ಲಿಕೇಶನ್‌ನಲ್ಲಿಯೇ ಕಾರ್ಗೋ ಸೇವೆಯನ್ನು ಬುಕ್ ಮಾಡಲು ಆಯ್ಕೆಯನ್ನು ನೀಡಲಾಗುತ್ತದೆ. ಅಲ್ಲದೇ ಸಮಾರಂಭಗಳಿಗೆ ಬಸ್‌ಗಳನ್ನು ಬಾಡಿಗೆಗೆ ಪಡೆಯಲು ಅನುಕೂಲವಾಗುವಂತೆ ಅಪ್ಲಿಕೇಶನ್‌ನಲ್ಲಿಯೇ ಫೀಚರ್‌ಗಳನ್ನು ಸೇರಿಸಲಾಗುತ್ತದೆ.

Comments


Top Stories

bottom of page