ಸಚಿನ್ ಆತ್ಮಹತ್ಯೆಗೆ ಇಡೀ ಸರಕಾರ ಹೊಣೆ
- Ananthamurthy m Hegde
- Jan 1
- 1 min read
ಯಲ್ಲಾಪುರ: ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ನೇರವಾದ ಆರೋಪ ಇದ್ದರೂ ರಾಜೀನಾಮೆ ಪಡೆಯದೇ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಇಡೀ ಸರ್ಕಾರವೇ ಮೇರ ಹೊಣೆಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಅವರು ಬುಧವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಸಚಿನ್ ಪಾಂಚಾಳ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡಬೇಕು. ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು. ಈ ಮೂರು ಬೇಡಿಕೆಗಳು ಜ.3 ರ ಸಂಜೆಯೊಳಗೆ ಈಡೇರದಿದ್ದರೆ, ಬಿಜೆಪಿ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಸರಣಿ ಕೊಲೆಗಡುಕ, ಕಿಕ್ ಬ್ಯಾಕ್ ಸರ್ಕಾರ. ವಾಲ್ಮಿಕೀ ನಿಗಮದ ಅಧಿಕಾರಿಯೊಬ್ಬರು ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ಬೆಳಗಾವಿ, ಮಂಡ್ಯ ಸೇರಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಲಂಚಕ್ಕಾಗಿ ಒತ್ತಡ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಸರ್ಕಾರದ ಸಚಿವರು, ಅವರ ಆಪ್ತರು ಜನರನ್ನು ತಂದು ನಿಲ್ಲಿಸಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 1252 ಬಾಣಂತಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಕಳಪೆ ಗುಣಮಟ್ಟದ ಔಷಧ, ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಯ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರ, ಕಿರಕುಳದ ರಾಜಕಾರಣ, ಅವ್ಯವಸ್ಥೆಗಳನ್ನು ಖಂಡಿಸಿ ರಾಜ್ಯದಾದ್ಯಂತ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮಾಧ್ಯಮ ಸಂಚಾಲಕ ಕೆ.ಟಿ.ಹೆಗಡೆ, ಇಡಗುಂದಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಿ.ಆರ್.ಭಾಗ್ವತ, ಜಿಲ್ಲಾ ಪ್ರಮುಖರಾದ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ ಇದ್ದರು.
Comentarios