ಸಮಗ್ರ ಅಭಿವೃದ್ಧಿಗಾಗಿ, ಪಕ್ಷಾತೀತವಾಗಿ ಕದಂಬ ಕನ್ನಡ ಜಿಲ್ಲೆ ಬೆಂಬಲಿಸಲು ಕರೆ
- Ananthamurthy m Hegde
- Dec 24, 2024
- 1 min read
ಯಲ್ಲಾಪುರ: ಪ್ರಾಕೃತಿಕವಾಗಿ ಘಟ್ಟದ ಕೆಳಗಿನ ಪ್ರದೇಶಗಳಿಗೆ, ಘಟ್ಟದ ಮೇಲಿನ ಭಾಗಗಳಿಗೆ ಭಿನ್ನತೆಯಿದೆ. ಮೇಲಿನ ಏಳು ತಾಲೂಕುಗಳು ಅರಣ್ಯದಿಂದ ಆವೃತ್ತವಾಗಿರುವ ತಾಲೂಕಾಗಿದ್ದು, ನಮ್ಮ ಜನರ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಸ್ಪತ್ರೆ ಸಿಗಬೇಕೆಂದರೆ ಕದಂಬ ಕನ್ನಡ ಜಿಲ್ಲೆ ಆಗಲೇಬೇಕು ಎಂದು ಯಲ್ಲಾಪುರ ಅಡಕೆ ವರ್ತಕರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಹಿರಿಯ ಸಹಕಾರಿ ಉಮೇಶ ಭಾಗ್ವತ್ ಮಾತನಾಡಿ, ಪ್ರತ್ಯೇಕ ಜಿಲ್ಲಾ ಹೋರಾಟ ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಪಕ್ಷಾತೀತವಾಗಿ ನಾವೆಲ್ಲ ಬೆಂಬಲಿಸಿ, ಇದಕ್ಕಾಗಿ ಹೋರಾಡಲು ಸಿದ್ಧರಿದ್ದೇವೆ ಎಂದರು.
ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತ ರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಕದಂಬ ಕನ್ನಡ ಜಿಲ್ಲೆ ರಚನೆಗೆ ಹೋರಾಟ ನಡೆಯುತ್ತಿದೆ. ಯಲ್ಲಾಪುರದ ಜನರ ಬೆಂಬಲ, ಅಭಿಪ್ರಾಯ ಸಂಗ್ರಹಣೆಗಾಗಿ ಜ.21 ರಂದು ಮಧ್ಯಾಹ್ನ 3 ಕ್ಕೆ ಯಲ್ಲಾಪುರದ ಅಡಕೆ ಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅತ್ಯಗತ್ಯ. ಜಿಲ್ಲಾ ಕೇಂದ್ರದ ಬಗ್ಗೆ ಈಗಲೇ ನಿರ್ಣಯ ಬೇಡ. ಎಲ್ಲರೂ ಒಟ್ಟಾಗಿ ಜಿಲ್ಲೆಯ ರಚನೆಗೆ ಪ್ರಯತ್ನಿಸೋಣ. ನಂತರ ಅನುಕೂಲತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಲ್ಲಾ ಕೇಂದ್ರದ ನಿರ್ಣಯವಾಗಲಿ ಎಂದು ಹೇಳಿದರು.
ಬೆಳಗಾವಿಯಲ್ಲಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಿದಾಗ ಶಾಸಕ ಶಿವರಾಮ ಹೆಬ್ಬಾರ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಸಹ ಹೋರಾಟದಲ್ಲಿ ನಮ್ಮೊಂದಿಗೆ ಇದ್ದು, ಬೆಂಬಲಿಸಿದ್ದಾರೆ. ಆಡಳಿತದವರ ಜತೆ ಜನ ಬೆಂಬಲವೂ ದೊರೆತರೆ ಯಶಸ್ಸು ಸಿಗಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಹೋರಾಟ ಸಮಿತಿಯ ವಿ.ಎಂ.ಭಟ್ಟ, ಸ್ಥಳೀಯ ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಉಮೇಶ ಭಾಗ್ವತ, ಗಣಪತಿ ಬೋಳಗುಡ್ಡೆ, ಪ್ರಸಾದ ಹೆಗಡೆ, ರಾಘವೇಂದ್ರ ಭಟ್ಟ, ಗಣೇಶ ಹೆಗಡೆ, ಬಾಬು ಬಾಂದೇಕರ್, ರವಿ ದೇವಾಡಿಗ ಇದ್ದರು.
Komentar