ಹೊಸ ಕೇಂದ್ರ ಒಪ್ಪಂದದಲ್ಲಿ ಟೀಮ್ ಇಂಡಿಯಾದ 16 ಮಂದಿಗೆ ಸ್ಥಾನ
- Ananthamurthy m Hegde
- Mar 25
- 1 min read
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರ್ತಿಯರ ಸೆಂಟ್ರಲ್ ಕಾಂಟ್ರಾಕ್ಟ್ ನವೀಕರಿಸಿದ್ದು ಒಟ್ಟು 16 ಮಂದಿಯನ್ನು ಹೊಸ ಕೇಂದ್ರ ಒಪ್ಪಂದದಲ್ಲಿ ಸೇರ್ಪಡೆ ಮಾಡಿಕೊಂಡಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) 2024-25ನೇ ಸಾಲಿನ ಭಾರತೀಯ ಮಹಿಳಾ ಕ್ರಿಕೆಟಿಗರ ಹೊಸ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿಯ ವಾರ್ಷಿಕ ಕೇಂದ್ರೀಯ ಒಪ್ಪಂದದಲ್ಲಿ 16 ಮಹಿಳಾ ಆಟಗಾರ್ತಿಯರಿಗೆ ಸ್ಥಾನ ಲಭಿಸಿದೆ.
ನೂತನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಇದರಲ್ಲಿ ಮೂವರು ಆಟಗಾರ್ತಿಯರು ಎ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಬಿ ಗ್ರೇಡ್‌ನಲ್ಲಿ ನಾಲ್ವರು ಆಟಗಾರ್ತಿಯರಿದ್ದು, ಉಳಿದ 9 ಆಟಗಾರ್ತಿಯರು ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಈ ಒಪ್ಪಂದವು ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರವರೆಗೆ ಚಾಲ್ತಿಯಲ್ಲಿರಲಿದೆ.

ಎ ಗ್ರೇಡ್ ನಲ್ಲಿ ಮೂರು ಮಂದಿ:
ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಅವರನ್ನು ಗ್ರೇಡ್ ಎ ವಿಭಾಗಕ್ಕೆ ಸೇರಿಸಲಾಗಿದೆ. ಅಂತೆಯೇ ರೇಣುಕಾ ಠಾಕೂರ್, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ ಮತ್ತು ಶಫಾಲಿ ವರ್ಮಾ ಗ್ರೇಡ್ ಬಿ ನಲ್ಲಿದ್ದಾರೆ. ಯಸ್ತಿಕಾ ಭಾಟಿಯಾ, ರಾಧಾ ಯಾದವ್, ಕನ್ನಡತಿ ಶ್ರೇಯಾಂಕ ಪಾಟೀಲ್, ಟೈಟಾಸ್ ಸಾಧು, ಅರುಂಧತಿ ರೆಡ್ಡಿ, ಅಮನ್‌ಜೋತ್ ಕೌರ್, ಉಮಾ ಛೆಟ್ರಿ, ಸ್ನೇಹಾ ರಾಣಾ ಮತ್ತು ಪೂಜಾ ವಸ್ತ್ರಕರ್ ಅವರು ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ವರದಿಗಳ ಪ್ರಕಾರ ಎ ಗ್ರೇಡ್ ಆಟಗಾರ್ತಿಯರು ವಾರ್ಷಿಕ ತಲಾ 50 ಲಕ್ಷ ರೂ. ವೇತನ ಪಡೆಯಲಿದ್ದು, ಬಿ ಗ್ರೇಡ್ ಆಟಗಾರ್ತಿಯರಿಗೆ ವಾರ್ಷಿಕ ತಲಾ 30 ಲಕ್ಷ ರೂ. ಮತ್ತು ಸಿ ಗ್ರೇಡ್ ಆಟಗಾರ್ತಿಯರಿಗೆ ವಾರ್ಷಿಕವಾಗಿ ತಲಾ 10 ಲಕ್ಷ ರೂ.ಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಬಿಸಿಸಿಐ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಒಂದೇ ರೀತಿಯ ಪಂದ್ಯ ಶುಲ್ಕವನ್ನು ಪಾವತಿಸುತ್ತದೆ. ಆದರೆ ಕೇಂದ್ರ ಒಪ್ಪಂದದಲ್ಲಿ ಅಗಾಧ ವ್ಯತ್ಯಾಸವಿದೆ ಎಂದು ಹೇಳಲಾಗಿದೆ. ಪುರುಷ ಆಟಗಾರರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಗ್ರೇಡ್ ಎ ಪ್ಲಸ್ ಸೇರಿದಂತೆ ನಾಲ್ಕು ವಿಭಾಗಗಳಿವೆ. ಆದರೆ ಆಟಗಾರ್ತಿಯರ ಪಟ್ಟಿಯಲ್ಲಿ ಕೇವಲ 3 ವಿಭಾಗಗಳು ಮಾತ್ರ ಇವೆ.
Kommentare