top of page

ಹೊಸ ವರ್ಷಾಚರಣೆಗೆ ಉತ್ತರ ಕನ್ನಡ ಫೇವರಿಟ್ ಸ್ಪಾಟ್

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read
ree

ಕಾರವಾರ : ಈ ವರ್ಷ ಅತಿಯಾದ ಮಳೆ ಎದುರಿಸಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ಕ್ಯಾಲೆಂಡರ್‌ ವರ್ಷಾಚರಣೆ ಹೊತ್ತಲ್ಲಿ ತಣ್ಣನೆಯ ವಾತಾವರಣ ಆರಿಸಿಕೊಂಡಿದ್ದು, ಹೋಟೆಲ್‌, ರೆಸಾರ್ಟ್‌ಗಳಿಗೆ ಮುಂಗಡ ಬುಕ್ಕಿಂಗ್‌ ಜೋರಾಗಿದೆ.

 ಜಿಲ್ಲೆಯ ಎಲ್ಲ ಕಡಲತೀರಗಳ ರೆಸಾರ್ಟ್‌, ಹೋಮ್‌ಸ್ಟೇಗಳಿಗೆ ತಿಂಗಳ ಹಿಂದಿನಿಂದಲೇ ಮುಂಗಡ ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಕರಾವಳಿ ತೀರವಾದರೂ ಸೆಕೆ ಇನ್ನೂ ಆವರಿಸಿಕೊಂಡಿಲ್ಲ. ಈ ಬಾರಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ವಾತಾವರಣ ಕೂಡ ಸಜ್ಜಾಗಿರುವುದರಿಂದ ವರ್ಷಾಂತ್ಯದಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಉತ್ತರ ಕನ್ನಡ ಜಿಲ್ಲೆಯತ್ತ ಧಾವಿಸುವ ನಿರೀಕ್ಷೆ ಇದೆ.

ಈ ಬಾರಿ ಡಿ. 31 ಮಂಗಳವಾರ ಬಂದಿದೆ. ಹಾಗಾಗಿ ಬರುವ ವಾರಾಂತ್ಯವೇ ಎಲ್ಲೆಡೆ ಪ್ರವಾಸಿಗರ ಕಲರವ ಮೇಳೈಸುವ ಸಾಧ್ಯತೆ ಇದೆ. ಆ ರೀತಿಯಲ್ಲಿಯೇ ಎಲ್ಲ ರೆಸಾರ್ಟ್‌, ಹೋಮ್‌ಸ್ಟೇ, ಹೋಟೆಲ್‌ಗಳು ಸಿದ್ಧತೆ ನಡೆಸಿವೆ. ಕಳೆದ ವರ್ಷ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನ ಕೊಠಡಿ ಸಿಗದೆ ಪರದಾಡಿದ್ದರು. ಕೊನೆ ಗಳಿಗೆಯಲ್ಲಿ ಟೆಂಟ್‌ ಕಟ್ಟಿ ಬಾಡಿಗೆ ಕೊಟ್ಟ ಘಟನೆಗಳೂ ನಡೆದಿತ್ತು.

ಅತಿಯಾದ ಮಳೆ, ಶಿರೂರು ದುರಂತ ಮತ್ತಿತರ ಕಾರಣದಿಂದ ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಶುರುವಾಗಲು ತಡವಾಗಿತ್ತು. ಎರಡು ತಿಂಗಳಿಂದ ಪ್ರವಾಸಿಗರ ಆಗಮನ ಶುರುವಾಗಿದೆ. ಡಿಸೆಂಬರ್‌ ತಿಂಗಳಲ್ಲಿ ಹೆಚ್ಚಿನ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯ ಕಡೆ ಬರುತ್ತಾರೆ. ಈ ಬಾರಿ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಜನ ಎರಡು ತಿಂಗಳ ಹಿಂದಿನಿಂದಲೇ ಕೊಠಡಿ ಮುಂಗಡ ಕಾಯ್ದಿರಿಸಿಕೊಳ್ಳುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ ತಿಳಿಸಿದರು.

ಇದರ ಜತೆಗೆ ಗೋವಾಕ್ಕೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಠಡಿ ಬಾಡಿಗೆಗಳು ಬಹಳ ಕಡಿಮೆ ಇದೆ. ಊಟ, ಓಡಾಟ ಖರ್ಚು ಕೂಡ ಕಡಿಮೆ. ಹಾಗಾಗಿ ಪ್ರವಾಸಿಗರ ಸೆಳೆತ ಉತ್ತರ ಕನ್ನಡ ಜಿಲ್ಲೆಯ ಕಡೆಯೇ ಹೆಚ್ಚಿದೆ ಎನ್ನುವುದು ಪ್ರವಾಸಿಗರ ಅನಿಸಿಕೆ.

ಜಿಲ್ಲೆಯಲ್ಲಿ ಕಾರವಾರ, ಜೋಯಿಡಾ, ದಾಂಡೇಲಿ, ಕುಮಟಾ ತಾಲೂಕಿನ ಗೋಕರ್ಣ, ಬಾಡ, ಹೊನ್ನಾವರ, ಮುರುಡೇಶ್ವರ, ಭಟ್ಕಳ ಭಾಗದಲ್ಲಿ ಹೆಚ್ಚಿನ ರೆಸಾರ್ಟ್‌ಗಳು ಇವೆ. ಇವು ಸೇರಿ ಇಡೀ ಜಿಲ್ಲೆಯಲ್ಲಿ ಹೋಮ್‌ ಸ್ಟೇ ಹೆಸರಿನಲ್ಲಿ ನಡೆಯುವ ರೆಸಾರ್ಟ್‌ಗಳು ಬೇಕಾದಷ್ಟಿವೆ. ಅದರಲ್ಲಿ ಜಲಸಾಹಸ ಕ್ರೀಡೆಗಳು ನಡೆಯುವ ದಾಂಡೇಲಿ, ಗೋಕರ್ಣಕ್ಕೆ ಹೆಚ್ಚಿನ ಬೇಡಿಕೆ ಇದೆ.

ಮುರುಡೇಶ್ವರದಲ್ಲಿ ಸದ್ಯ ಸ್ಕೂಬಾ ಡೈವಿಂಗ್‌ ಬಿಟ್ಟು ಉಳಿದ ಜಲಸಾಹಸ ಕ್ರೀಡೆ ತಾತ್ಕಾಲಿಕವಾಗಿ ಬಂದ್‌ ಆಗಿದೆ. ಸ್ಕೂಬಾ ಡೈವಿಂಗ್‌ ಕೂಡ ಬಹಳ ದುಬಾರಿಯಾಗಿದೆ. ಆದರೂ ಕಡಲತೀರ ಇರುವ ಎಲ್ಲ ಪ್ರದೇಶಗಳಲ್ಲಿ ಹೊಸವರ್ಷದ ಸ್ವಾಗತಕ್ಕೆ ವ್ಯವಹಾರ ಚಟುವಟಿಕೆ ಚುರುಕಾಗಿದೆ.

ಹೊಸ ವರ್ಷಾಚರಣೆ ಮೋಜಿಗೆ ಮಾದಕವಸ್ತುಗಳ ಬಳಕೆಯಾಗುವ ಸಾಧ್ಯತೆ ಅಧಿಕವಾಗಿರುವುದರಿಂದ ಪೊಲೀಸ್‌ ಇಲಾಖೆಯಿಂದ ಎಲ್ಲೆಡೆ ಕಣ್ಣಿಡಲಾಗಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಗಾಂಜಾ ಬಳಕೆ ಮೊದಲಿನಿಂದಲೂ ನಡೆಯುತ್ತಿದೆ. ಈಗೀಗ ಮತ್ತಷ್ಟು ಚುರುಕಾಗಿದೆ. ಅದರ ಜತೆಗೆ ಜಿಲ್ಲೆಗೆ ಗೋವಾ ಮೂಲಕ ಎಲ್‌ಎಸ್‌ಡಿ ಬರುವ ಅಪಾಯ ಕೂಡ ಇದೆ. ಹಾಗಾಗಿ ಪೊಲೀಸ್‌ ಈ ವಿಚಾರದಲ್ಲಿ ಎಚ್ಚರಿಕೆ ವಹಿಸುತ್ತಿದೆ.

Comments


Top Stories

bottom of page