ಹಾಸನದಲ್ಲಿ ೨ ೫ ಕ್ಕೇರಿದ ಹೃದಯಾಘಾತ ಪ್ರಕರಣ; ಮೃತರ ಕುಟುಂಬಕ್ಕೆ ಭೇಟಿ ನೀಡಿದ ತನಿಖಾ ತಂಡ
- Ananthamurthy m Hegde
- Jul 2
- 1 min read

ಹಾಸನ: ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಹೃದಯಾಘಾತದಿಂದ 25 ಮಂದಿ ಸಾವನ್ನಪ್ಪಿರುವ ಘಟನೆಗಳು ಜನರಲ್ಲಿ ಆತಂಕ ಮೂಡಿಸಿವೆ. ಈ ಸರಣಿ ಸಾವುಗಳಿಗೆ ನಿಖರ ಕಾರಣವನ್ನು ಕಂಡುಹಿಡಿಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡಿಹೆಚ್‌ಒ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ರಚಿಸಿದೆ. ಈ ತಂಡ ಮೃತರ ಕುಟುಂಬಗಳಿಗೆ ಭೇಟಿ ನೀಡಿ, ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ಮೃತರ ಮನೆಗೆ ತನಿಖಾ ತಂಡ ಭೇಟಿ:
ಈ ತನಿಖೆಯ ಭಾಗವಾಗಿ, ತಂಡವು ಹಾಸನ ತಾಲೂಕಿನ ಚಿಕ್ಕಕೊಂಡಗುಳ ಗ್ರಾಮದ ಸತೀಶ್ ಎಂಬವರ ಮನೆಗೆ ಭೇಟಿ ನೀಡಿತು. ಮೃತ ಸತೀಶ್ ಅವರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ತಂಡವು ಒಂದು ಗಂಟೆಗೂ ಹೆಚ್ಚು ಕಾಲ ತನಿಖೆ ನಡೆಸಿತು. ಸತೀಶ್ ಅವರ ಪತ್ನಿ ಮತ್ತು ತಾಯಿಯಿಂದ ಮಾಹಿತಿಯನ್ನು ಕಲೆಹಾಕಿದ ತಂಡ, ಅವರ ಆರೋಗ್ಯ ಸ್ಥಿತಿ, ಆಹಾರ ಪದ್ಧತಿ, ಜೀವನಶೈಲಿ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
ತನಿಖಾ ತಂಡದಲ್ಲಿ ಆರ್‌ಸಿಎಚ್ ವೈದ್ಯಾಧಿಕಾರಿ ಡಾ. ಚೇತನ್, ಮೆಡಿಸಿನ್ ವಿಭಾಗದ ಡಾ. ಬಿಂದು ಸೇರಿದಂತೆ ಇತರ ತಜ್ಞರು ಒಳಗೊಂಡಿದ್ದಾರೆ. ಈ ತಂಡವು ಜಿಲ್ಲಾದ್ಯಂತ ಸಾವನ್ನಪ್ಪಿದ 25 ಮಂದಿಯ ಕುಟುಂಬಗಳಿಗೆ ಭೇಟಿ ನೀಡಿ, ಅವರ ಆರೋಗ್ಯದ ಇತಿಹಾಸ, ಜೀವನಶೈಲಿ, ಆಹಾರ ಕ್ರಮ, ದೈಹಿಕ ಚಟುವಟಿಕೆಗಳು, ಮಾನಸಿಕ ಒತ್ತಡ, ಮತ್ತು ಇತರ ಸಂಬಂಧಿತ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.
Comments