top of page

೬ ತಿಂಗಳಿನಿಂದ ಬಿಡುಗಡೆಯಾಗದ ಅನುದಾನ

  • Writer: Ananthamurthy m Hegde
    Ananthamurthy m Hegde
  • Jul 3
  • 1 min read

ಕಾರವಾರ: ಜಾನುವಾರುಗಳು ಜೀವ ಕಳೆದುಕೊಂಡರೆ ಹೈನುಗಾರರಿಗೆ ಆರ್ಥಿಕ ನೆರವು ನೀಡುವ 'ಅನುಗ್ರಹ' ಯೋಜನೆಗೆ ಹಣ ಬಿಡುಗಡೆ ಆಗುತ್ತಿಲ್ಲ ಎಂಬ ಆರೋಪ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 470 ಜಾನುವಾರು ಮಾಲೀಕರಿಗೆ ಪರಿಹಾರ ಕೈಸೇರದೆ ಬಾಕಿ ಉಳಿದುಕೊಂಡಿದೆ.

ಹಸು ಅಥವಾ ಎಮ್ಮೆ ಪ್ರಾಕೃತಿಕ ಅವಘಡ, ಗಂಭೀರ ಕಾಯಿಲೆ, ಹಾವು ಕಡಿತದಂತಹ ಕಾರಣದಿಂದ ಮೃತಪಟ್ಟರೆ ತಲಾ ₹10 ಸಾವಿರ ಪರಿಹಾರ ನೀಡುವ ಯೋಜನೆ ಇದಾಗಿದೆ. ಏಪ್ರಿಲ್ ಆರಂಭದಿಂದ ಮೊತ್ತವನ್ನು ₹15 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ವಿಮೆ ಸೌಲಭ್ಯ, ಪ್ರಾಕೃತಿಕ ವಿಪತ್ತು ಪರಿಹಾರ ನಿಧಿ ಪಡೆಯದಿದ್ದರೆ ಮಾತ್ರ ಅನುಗ್ರಹ ಯೋಜನೆಯಡಿ ಪರಿಹಾರ ಪಡೆಯಲು ಜಾನುವಾರು ಮಾಲೀಕರು ಅರ್ಹರಾಗುತ್ತಾರೆ.

ವಿವಿಧ ಅವಘಡಗಳ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದ ಅವಧಿಯಲ್ಲಿ ಮೃತಪಟ್ಟ 1,572 ಜಾನುವಾರುಗಳಿಗೆ ಅನುಗ್ರಹ ಯೋಜನೆ ಮೂಲಕ ಪರಿಹಾರ ಒದಗಿಸಲು ಪಶು ಸಂಗೋಪನಾ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಅವುಗಳ ಪೈಕಿ 1,102 ಜಾನುವಾರುಗಳ ಮಾಲೀಕರ ಖಾತೆಗೆ ಪರಿಹಾರ ಸೇರಿದೆ. ಜನವರಿ ತಿಂಗಳಿನಿಂದಲೂ ಪರಿಹಾರಧನ ಬಿಡುಗಡೆಯಾಗದೆ ಬಾಕಿ ಉಳಿದುಕೊಂಡಿದೆ ಎಂಬುದು ಹೈನುಗಾರರ ದೂರು.

'ಸಹಕಾರ ಸಂಘದಲ್ಲಿ ₹70 ಸಾವಿರ ಸಾಲ ಮಾಡಿ ಖರೀದಿಸಿದ ಹಸು ಕೆಲವೇ ತಿಂಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟಿತು. ಮಾಡಿದ ಸಾಲ ಈವರೆಗೂ ತೀರಿಲ್ಲ. ಹೊಸ ಹಸು ಖರೀದಿಗೂ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಸರ್ಕಾರ ನೀಡುವ ಅಲ್ಪ ಪರಿಹಾರ ಮೊತ್ತವಾದರೂ ಸಿಗಬಹುದೆಂದು ಅರ್ಜಿ ಸಲ್ಲಿಸಿ ಆರು ತಿಂಗಳು ಕಳೆದಿದೆ. ಈವರೆಗೆ ಬಿಡಿಗಾಸು ಸಿಕ್ಕಿಲ್ಲ' ಎಂದು ತಾಲ್ಲೂಕಿನ ಹೋಟೆಗಾಳಿಯ ಮಿಲಿಂದ ನಾಯ್ಕ ಹೇಳಿದರು.

'ಅನುಗ್ರಹ ಯೋಜನೆಯಡಿ ನೀಡುವ ಪರಿಹಾರ ಮೊತ್ತ ಹೈನುಗಾರರಿಗೆ ತಾತ್ಕಾಲಿಕ ಸಮಾಧಾನಕ್ಕಷ್ಟೆ. ಹೊಸ ಹಸು ಖರೀದಿಗಾಗಲಿ, ಹಸುವಿನ ಖರೀದಿಗೆ ಮಾಡಿದ ಸಾಲ ತೀರಿಸಲಾಗಲಿ ಸಾಲದು. ಪರಿಹಾರ ಮೊತ್ತ ಇನ್ನಷ್ಟು ಏರಿಕೆ ಮಾಡಿದರಷ್ಟೆ ಅನುಕೂಲ ಆಗುತ್ತದೆ' ಎಂದು ರೈತ ವಿದ್ಯಾಧರ ಖಾರ್ಗೇಕರ ಹೇಳಿದರು.

Comments


Top Stories

bottom of page