top of page

Bhairadevi Movie Review: ಅಘೋರಿಗಳ ವಿಸ್ಮಯ ಪ್ರಪಂಚದಲ್ಲಿ ದುಷ್ಟ ಶಿಕ್ಷಕಿ, ಶಿಷ್ಟ ಪರಿಪಾಲಕಿ ಭೈರಾದೇವಿ; ರಾಧಿಕಾ ಕುಮಾರಸ್ವಾಮಿ ಹೊಸ ಪ್ರಯೋಗ

  • Oct 22, 2024
  • 2 min read

Updated: Oct 24, 2024

ಭೈರಾದೇವಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಹೊಸ ಚಿತ್ರ, ಅಘೋರಿಗಳ ವಿಸ್ಮಯ ಪ್ರಪಂಚವನ್ನು ತೋರಿಸುತ್ತದೆ. ಶ್ರೀಜೈ ನಿರ್ದೇಶನದ ಈ ಚಿತ್ರದಲ್ಲಿ ಡಿಸಿಪಿ ಅರವಿಂದ್ (ರಮೇಶ್ ಅರವಿಂದ್) ತನ್ನ ಕುಟುಂಬವನ್ನು ದುಷ್ಟ ಶಕ್ತಿಯಿಂದ ರಕ್ಷಿಸಲು ಭೈರಾದೇವಿಯಿಂದ ಸಹಾಯ ಪಡೆಯುವ ಕಥೆ ಇದೆ. ಕಾಶಿ ಮತ್ತು ಮಣಿಕರ್ಣಿಕಾ ಘಾಟ್ ದೃಶ್ಯಗಳು, ಅಘೋರಿಗಳ ಜೀವನ ಶೈಲಿಯ ಪರಿಚಯ ಮತ್ತು ರಾಧಿಕಾ ಅವರ ಅಘೋರಿ ಪಾತ್ರದ ಅಭಿನಯ ಪ್ರಮುಖ ಆಕರ್ಷಣೆಗಳಾಗಿವೆ.












ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ಚಿತ್ರ ಭೈರಾದೇವಿ ಬಿಡುಗಡೆಯಾಗಿದೆ. ಶ್ರೀಜೈ ನಿರ್ದೇಶನದ ಈ ಸಿನಿಮಾವು ಅಘೋರಿಗಳು ದೆವ್ವ ಮತ್ತು ದೇವರ ಬಗೆಗಿನ ಕಥೆಯಾಗಿದೆ.

ರಾಧಿಕಾ ಅಘೋರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಕಾಶಿ ಹಾಗೂ ಮಣಿಕರ್ಣಿಕಾ ಘಾಟ್ ದರ್ಶನವೂ ಆಗುತ್ತೆ. ಜೊತೆಗೆ ಅಘೋರಿಗಳ ಲೈಫ್‌ಸ್ಟೈಲಿನ ಪರಿಚಯವೂ ಆಗುತ್ತದೆ. ಯಾವ ತೆಲುಗು ಸಿನಿಮಾಕ್ಕೂ ಕಡಿಮೆ ಇಲ್ಲದ ಹಾಗೆ ಬಹಳ ರಿಚ್ ಆಗಿ ಅಘೋರಿ ಲೈಫನ್ನು ತೋರಿಸಿದ್ದಾರೆ. ಬಹುತೇಕ ಕೌಟುಂಬಿಕ, ಪ್ರೀತಿ, ಪ್ರೇಮ ಕಥೆಗಳಲ್ಲಿ ನಟಿಸಿದ್ದ ರಾಧಿಕಾ ಕುಮಾರಸ್ವಾಮಿ ಹೊಸದೊಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ, ಅವರ ಸಿನಿಮಾಗಳ ಮಟ್ಟಿಗೆ ಇದೊಂದು ಹೊಸ ಪ್ರಯೋಗವಾಗಿದೆ.

ಚಿತ್ರದ ಶಕ್ತಿಯು ಅದರ ಶೀರ್ಷಿಕೆಯಲ್ಲಿ ಮಾತ್ರವಲ್ಲ ಕಥೆಯಲ್ಲಿಯೂ ಅಡಗಿದೆ. ಪ್ರಬಲವಾದ ಕಥಾವಸ್ತುವನ್ನು ಒಳಗೊಂಡಿರುವ ಭೈರಾದೇವಿ ಸಿನಿಮಾದಲ್ಲಿ ಪ್ರತಿಯೊಬ್ಬರ ಪಾತ್ರ ಅಧ್ಬುತವಾಗಿದೆ.

ಪೊಲೀಸ್ ಅಧಿಕಾರಿಯಾಗಿರುವ ಅರವಿಂದ್ ಗೆ (ರಮೇಶ್ ಅರವಿಂದ್) ತನ್ನ ಮೃತ ಹೆಂಡತಿಯ ಆತ್ಮ ದೆವ್ವದಿಂದ ಕಾಡುತ್ತದೆ. ಆಕೆ ದುರಂತವೊಂದರಲ್ಲಿ ತನ್ನ ಪ್ರಾಣ ತ್ಯಜಿಸಿರುತ್ತಾಳೆ. ಅರವಿಂದ್ ಮಗಳಿಗೆ ತಾಯಿಯ ಸಾವು ಅರಗಿಸಿಕೊಳ್ಳಲಾಗದು. ರಾತ್ರಿಯಲ್ಲಿ ತನ್ನ ಸತ್ತ ತಾಯಿಯನ್ನು ನಿಗೂಢವಾಗಿ ಭೇಟಿಮಾಡುತ್ತಾಳೆ, ತನ್ನ ತಾಯಿ ತನ್ನ ಜೊತೆಗಿದ್ದಾಳೆ ಎಂದು ಆಕೆ ವರ್ತಿಸುವ ರೀತಿ ಮನೆಯಲ್ಲಿರುವವರ ನಿದ್ದೆಗೆಡಿಸುತ್ತದೆ. ಇದರೊಂದಿಗೆ ರಹಸ್ಯ ಕತೆಯೊಂದು ತೆರೆದುಕೊಳ್ಳುತ್ತದೆ.

ಅರವಿಂದ್ ಅವರ ಮಗಳೊಂದಿಗಿನ ಸಂಬಂಧವನ್ನು ಸಹಾನುಭೂತಿ ಮೂಡಿಸಲು ರಚಿಸಲಾಗಿದೆ, ಶಿಕ್ಷಕಿ ಲಕ್ಷ್ಮಿ (ಮಾಳವಿಕಾ ಅವಿನಾಶ್) ಇವರಿಬ್ಬರ ನಡುನೆ ನಿರ್ಣಾಯಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಮಗುವಿಗೆ ಕಾಡುತ್ತಿರುವ ಸಮಸ್ಯೆ ಬಗ್ಗೆ ಆಕೆ ಸ್ಪಷ್ಟವಾಗಿ ಹೇಳುತ್ತಾಳೆ, ಅರವಿಂದನ ಕಾರಿನಲ್ಲಿ ಅಡಗಿರುವ ಯಾವುದೋ ಕೆಟ್ಟ ಶಕ್ತಿಯ ಸುಳಿವು ನೀಡುತ್ತಾಳೆ. ಹೀಗೆ ಕೌಟುಂಬಿಕ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಅರವಿಂದ್ ಗೆ ಆತನ ಸಹೋದ್ಯೋಗಿ ವೀರಯ್ಯ (ರಂಗಾಯಣ ರಘು) ನಿಗೂಢ ಆಚರಣೆಗಳ ಅಭ್ಯಾಸ ಮಾಡುವ ಅಘೋರಿಯಿಂದ ಸಹಾಯ ಪಡೆಯಲು ಶಿಫಾರಸು ಮಾಡುತ್ತಾರೆ.

ಇಲ್ಲಿಂದ ಕಥೆಯು ವಾರಣಾಸಿಗೆ ಮುಂದುವರೆಯುತ್ತದೆ. ವಾರಣಾಸಿ ಆಧ್ಯಾತ್ಮಿಕ ಮಹತ್ವದಲ್ಲಿ ಮುಳುಗಿರುವ ಸ್ಥಳವಾಗಿದ್ದು. ಮರಣಾನಂತರದ ಜೀವನದ ಬಗ್ಗೆ ತಿಳಿಸುತ್ತದೆ. ಮಣಿಕರ್ಣಿಕಾ ಘಾಟ್‌ನಲ್ಲಿನ ದೃಶ್ಯಗಳು ಜೀವನ ಮತ್ತು ಸಾವಿನ ಶಾಶ್ವತ ಚಕ್ರದ ಆಲೋಚನೆಗಳನ್ನು ಹುಟ್ಟುಹಾಕುತ್ತವೆ. ವಿಶೇಷವಾಗಿ ಅಘೋರಿ ಪಾತ್ರಗಳ ಪರಿಚಯದ ಸಮಯದಲ್ಲಿ 'ಓಂ ನಮಃ ಶಿವಾಯ' ಪಠಣವು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ಅಘೋರಿಗಳ ಜೀವನದ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಅಘೋರಿಯೊಂದಿಗೆ ಅರವಿಂದನ ಭೇಟಿಯಾಗುತ್ತದೆ. ಒಬ್ಬರ ಭೂತಕಾಲವನ್ನು ತನ್ನ ಅಂಗೈ ಮೂಲಕ ನೋಡಬಹುದು ಎಂಬ ಅಂಶವನ್ನು ಇಲ್ಲಿ ತೋರಿಸಲಾಗಿದೆ, ಡಿಸಿಪಿ ಅರವಿಂದ್ ಅಘೋರಿಯ ಸಹಾಯ ಪಡೆದಾಗ ಅಲ್ಲಿ ಮತ್ತೊಂದು ಕಥೆ ಉದ್ಭವಿಸಿ ಭೂತ ಕಾಲದ ಕರಾಳ ರಹಸ್ಯಗಳು ತೆರೆದುಕೊಳ್ಳುತ್ತವೆ. ಡಿಸಿಪಿ ಅರವಿಂದ್ ತನ್ನ ಕುಟುಂಬವನ್ನು ದುಷ್ಟ ಶಕ್ತಿಯಿಂದ ರಕ್ಷಿಸಿಕೊಳ್ಳುತ್ತಾರೆಯೇ ಅದಕ್ಕೆ ಭೈರಾದೇವಿ ಹೇಗೆ ಸಹಾಯ ಮಾಡುತ್ತಾಳೆ ಎಂಬುದನ್ನು ತಿಳಿದುಕೊಳ್ಳಲು ನೀವು ಸಿನಿಮಾ ನೋಡಬೇಕು.

ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಪ್ರಯೋಗ, ದೆವ್ವ ಭೂತದ ಕಥೆಯುಳ್ಳ ಅನೇಕ ಸಿನಿಮಾಗಳು ಬಂದು ಹೋಗಿವೆ. ಆದರೆ ಅದ್ಧೂರಿ ನಿರ್ಮಾಣ ವಿಭಿನ್ನ ಕಥಾ ವಸ್ತುವಿನಿಂದಾಗಿ ಭೈರಾದೇವಿ ಸ್ವಲ್ಪ ಡಿಫರೆಂಟ್ ಎನಿಸುತ್ತದೆ.

ಚಿತ್ರದ ಮೊದಲಾರ್ಧ ವೇಗವಾಗಿ ಸಾಗುತ್ತದೆ, ದ್ವಿತೀಯಾರ್ಧದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ತೆರೆದುಕೊಳ್ಳುತ್ತದೆ. ಅಘೋರಿಗಳ ವಿಸ್ಮಯ ಪ್ರಪಂಚ ತೋರಿಸಲು ನಿರ್ದೇಶಕರು ಬಹಳ ಚೆನ್ನಾಗಿ ಗ್ರಾಫಿಕ್ಸ್ ಬಳಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಘೋರಿ ರೂಪಾದಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲಲ್ಲಿ ಕೆಲವು ದೃಶ್ಯಗಳನ್ನು ಅನವಾಶ್ಯಕವಾಗಿ ಎಳೆಯಲಾಗಿದೆ. ರಂಗಾಯಣ ರಘು ಹಾಸ್ಯ ಉತ್ತಮವಾಗಿದೆ. ಮತ್ತೊಬ್ಬ ಅಘೋರಿ ಪಾತ್ರದಲ್ಲಿ ರವಿಶಂಕರ್ ನಟನೆ ಗಮನ ಸೆಳೆಯುತ್ತದೆ.ರಮೇಶ್ ಅರವಿಂದ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡು ಗಮನ ಸೆಳೆಯುತ್ತವೆ, ಉಳಿದಂತೆ ಹಿನ್ನೆಲೆ ಸಂಗೀತದ ಅಬ್ಬರ ಜೋರಾಗಿದೆ.ಸಿನಿಮಾವನ್ನು ಥಿಯೇಟರ್‌ನಲ್ಲಿ ಕೂತು ಎಂಜಾಯ್ ಮಾಡೋದಕ್ಕೆ ಏನೂ ಅಡ್ಡಿ ಇಲ್ಲ.

ಸಿನಿಮಾ: ಭೈರಾದೇವಿ

ಪಾತ್ರವರ್ಗ: ರಾಧಿಕಾ ಕುಮಾರಸ್ವಾಮಿ, ರಮೇಶ್‌ ಅರವಿಂದ್‌, ರಂಗಾಯಣ ರಘು ಮತ್ತಿತರರು

ನಿರ್ದೇಶನ: ಶ್ರೀಜೈ

Comments


Top Stories

bottom of page