top of page

Langoti Man Cinema review: ಸಂಪ್ರದಾಯಸ್ಥ ಕುಟುಂಬದ ಮಡಿವಂತಿಕೆಯ ಲಂಗೋಟಿ; ಕೌಪೀನ ಧರಿಸುವ ಯುವಕನ ಪಜೀತಿ; ಪ್ರೇಕ್ಷಕನಿಗೆ ಹಾಸ್ಯದ ರಸದೌತಣ

  • Oct 22, 2024
  • 2 min read

Updated: Oct 24, 2024

ಸಂಜೋತ ಭಂಡಾರಿ ನಿರ್ದೇಶನದ 'ಲಂಗೋಟಿ ಮ್ಯಾನ್' ಹಾಸ್ಯದೊಂದಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ. ಲಂಗೋಟಿಯ ಮಹತ್ವವನ್ನು ತಾತನ ಮೂಲಕ ತೋರಿಸುತ್ತಾ, ಮೊಮ್ಮಗನ ಪಜೀತಿ ಹಾಗೂ ಸಮಸ್ಯೆಗಳ ಬಗ್ಗೆ ಚಿತ್ರಿಸಲಾಗಿದೆ.


ree










ನಿರ್ದೇಶಕಿ ಸಂಜೋತ ಭಂಡಾರಿ ನಿರ್ದೇಶನ ಮಾಡಿರುವ ಲಂಗೋಟಿಮ್ಯಾನ್ ತೆರೆ ಕಂಡಿದೆ. ಚಿತ್ರದಲ್ಲಿ ಲಂಗೋಟಿಯೇ ಪ್ರಧಾನ ಪಾತ್ರ ವಹಿಸಿರುವುದರಿಂದ ಸಿನಿಮಾಗೆ ಲಂಗೋಟಿಯೇ ನಾಯಕ ಎಂದರೆ ತಪ್ಪಾಗಲಾರದು.

ಲಂಗೋಟಿಯನ್ನು ಅತ್ಯಂತ ಕನಿಷ್ಠ ಉಡುಪು ಎನ್ನಲಾಗುತ್ತದೆ. ಆದರೆ ಆಧುನಿಕ ಕಾಲಮಾನದಲ್ಲಿ ಕೌಪೀನ ಧರಿಸುವವರು ಇದ್ದಾರೆಯೇ, ಮನೆಯ ಹಿರಿಯರ ಸಂಪ್ರದಾಯ, ಆಚಾರ ವಿಚಾರಗಳಿಗೆ ಕಟ್ಟು ಬೀಳುವ ಯುವಕ ಲಂಗೋಟಿ ಧರಿಸಿ ಅನುಭವಿಸುವ ಪಜೀತಿಯ ಬಗ್ಗೆ ಸಿನಿಮಾ ಕತೆಯಿದೆ. ನಿರ್ದೇಶಕ ಯೋಗರಾಜ್ ಭಟ್ ಧ್ವನಿಯಲ್ಲಿ ಪಾತ್ರಗಳ ಪರಿಚಯದಿಂದ ಆರಂಭವಾಗುವ 'ಲಂಗೋಟಿ ಮ್ಯಾನ್' ಚಿತ್ರ ಮಡಿವಂತಿಕೆಯ ಕುಟುಂಬದಲ್ಲಿ ಲಂಗೋಟಿ ಎಷ್ಟು ಮುಖ್ಯವಾದದ್ದು ಎಂಬುದನ್ನು ತೋರಿಸಲಾಗಿದೆ. ಯಾವುದೇ ಸಮುದಾಯಕ್ಕೆ ಅವಮಾನ ಆಗದಂತೆ ನಿರ್ದೇಶಕರು ಕಥೆ ಕಟ್ಟಿಕೊಟ್ಟಿದ್ದಾರೆ.

ಪೂರ್ವಿಕರು ನಡೆಸಿಕೊಂಡು ಬಂದ ಆಚಾರ, ವಿಚಾರ ಸಂಪ್ರದಾಯಗಳು ನಿರಂತರವಾಗಿ ಸಾಗುತ್ತಾ ಬರತ್ತಿವೆ. ಆದರೆ ಕಾಲಕ್ಕೆ ತಕ್ಕಂತೆ ವೇಷ, ಭೂಷಣ ಹಾಕೋದು ಸರ್ವೇಸಾಮಾನ್ಯವಾಗಿದೆ. ಇದರ ಹೊರತಾಗಿಯೂ ಗಂಡಸು ಧರಿಸುವ (ಕೌಪೀನ) ಲಂಗೋಟಿಯ ಕಟ್ಟುಪಾಡುಗಳಿಗೆ ಜೋತುಬಿದ್ದವರ ಬದುಕಿನಲ್ಲಿ ಎದುರಾಗುವ ಒಂದಷ್ಟು ಗೊಂದಲ, ಸಮಸ್ಯೆ, ನೋವು, ಅಪಮಾನ ಜೊತೆಗೆ ತನ್ನದಲ್ಲದ ತಪ್ಪಿನ ಇಕ್ಕಟ್ಟಿಗೆ ಸಿಲುಕಿ, ಹೇಗೆ ಪರದಾಡುತ್ತಾನೆ ಎಂಬುವ ವಿಚಾರವನ್ನು “ಲಂಗೋಟಿ ಮ್ಯಾನ್” ನಲ್ಲಿ ತೋರಿಸಲಾಗಿದೆ.

ಮಡಿಯೇ ಜೀವನ, ಆಚಾರವೇ ನಮ್ಮ ಪದ್ಧತಿ ಎನ್ನುತ್ತಾ ಬದುಕುವ ಮನೆಯ ಹಿರಿಯ ಜೀವ ತಾತ (ಧೀರೇಂದ್ರ). ಪುರೋಹಿತ್ಯ ಕೆಲಸದಲ್ಲೇ ಬದುಕು ನಡೆಸುತ್ತಾ, ಮನೆಯವರನ್ನೆಲ್ಲಾ ಶಿಸ್ತಿನಲ್ಲಿ ಸಾಕುತ್ತಾರೆ. ಇದೇ ಸಮಯದಲ್ಲಿ ಮನೆಯಲ್ಲಿ ಮುದ್ದಾದ ಮೊಮ್ಮಗುವಿನ ನಾಮಕರಣದ ಶುಭ ಸಂಭ್ರಮ. ಚಿನ್ನ, ಬೆಳ್ಳಿ ಉಡುಗೊರೆ ನಡುವೆ ಮಗುವಿಗೆ ಡೈಪರ್ ಹಾಕಲು ಮುಂದಾಗುತ್ತಿದ್ದಂತೆ ಗದ್ದಲ ಶುರುವಾಗುತ್ತದೆ. ಕೌಪೀನ (ಲಂಗೋಟಿಯ) ಮಹತ್ವ, ಅದರ ಹಿಂದಿರುವ ವಿಚಾರಗಳ ಕುರಿತು ವಾದ ವಿವಾದ ನಡೆಯುತ್ತದೆ. ತಾತ ನಾನು ಹೇಳಿದ್ದೆ ಸರಿ ಎನ್ನುತ್ತಲೇ, ಜೀವನ ಸಾಗಿ ಮೊಮ್ಮಗ ಬೆಳೆದು ದೊಡ್ಡವನಾಗುತ್ತಾನೆ. ತೀರ್ಥ (ಆಕಾಶ್ ರ‍್ಯಾಂಬೊ) ತಾಯಿಯ ಬಳಿಯೂ ತನ್ನ ಕಷ್ಟವನ್ನು ಹೇಳಲಾಗದೆ, ತಾತನ ವಿರುದ್ಧವು ವಾದಿಸಲಾಗದೆ ಬಾಲ್ಯದಿಂದಲೂ ಲಂಗೋಟಿಯಿಂದ ಅನುಭವಿಸಿದ ನೋವು, ಅಪಮಾನವನ್ನ ಸಹಿಸುತ್ತಾ ಜೀವನ ಸಾಗಿಸುತ್ತಾನೆ.

ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ತೀರ್ಥಕುಮಾರ್ ತನ್ನ ಅಜ್ಜನ ನಿರ್ಧಾರಗಳಿಗೆ ಬದ್ಧನಾಗಿರುತ್ತಾನೆ, ಆದರೆ ತೀರ್ಥನ ಲಂಗೋಟಿ ಆತನನ್ನು ರಕ್ಷಿಸುವ ಬದಲು ಸಮಸ್ಯೆಗೆ ದೂಡುತ್ತದೆ. ಆತನ ಗೆಳೆಯರು ಆತನನ್ನು ಬಹಿಷ್ಕರಿಸಿ ದೂರಕ್ಕೆ ತಳ್ಳುತ್ತಾರೆ, ಇದರಿಂದ ತೀರ್ಥ ಅಸಮಾಧಾನಗೊಳ್ಳುತ್ತಾನೆ. ಇದರ ಮದ್ಯದಲ್ಲೇ ತೀರ್ಥಕುಮಾರ್ ಆಕಸ್ಮಿಕವಾಗಿ ಪೊಲೀಸ್ ಅಧಿಕಾರಿಯ ಮಗಳು ನಭಾ (ಸ್ನೇಹಾ ಖುಷಿ) ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾನೆ. ನಭಾ, ಫ್ಯಾಷನಿಸ್ಟ್, ಆಧುನಿಕತೆಗೆ ಹೊಂದಿಕೊಂಡಿರುವವಳು. ತೀರ್ಥಕುಮಾರ್ ಅವಳಿಗೆ ವ್ಯತಿರಿಕ್ತ, ಅಂದರೆ ಸಾಂಪ್ರದಾಯ ಪಾಲಿಸುವ ಯುವಕ. ಆಕೆಯ ಬಳಿಯಿಂದ ಬ್ರಾಂಡೆಡ್ ಬಟ್ಟೆಗಳ ಬಗ್ಗೆ ತಿಳಿದುಕೊಳ್ಳುತ್ತಾನೆ.

ಕಥೆಯ ಮೊದಲಾರ್ದ ಜಾಲಿರೈಡ್‌ ನಂತೆ ಸಾಗುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಸಿನಿಮಾ ಗಂಭೀರವಾಗುತ್ತದೆ. ವೇಗದ-ಫ್ಯಾಶನ್ ಉದ್ಯಮ ಆಧುನಿಕ ಸಂಸ್ಕೃತಿ ಅಸಂಬದ್ಧತೆ ಬಗ್ಗೆ ಟೀಕಿಸುತ್ತದೆ. ಒಂದು ಅಪರಾಧದ ಉಪಕಥೆ ಹೊರಹೊಮ್ಮುತ್ತದೆ, ತೀರ್ಥಕುಮಾರ್ ಅಪಹರಣದ ಟ್ವಿಸ್ಟ್‌ನಲ್ಲಿ ಸಿಲುಕಿಕೊಳ್ಳುತ್ತಾನೆ. ತನ್ನ ಆಸೆಯಂತೆ ಲಂಗೋಟಿ ಬಿಟ್ಟು ತನಗಿಷ್ಟ ಬಂದದ್ದನ್ನು ಧರಿಸುತ್ತಾನೆಯೇ, ಆತನ ವಿರುದ್ಧ ಕೇಳಿ ಬಂದ ಕಿಡ್ನಾಪ್ ಮತ್ತು ರೇಪ್ ಆರೋಪಗಳಿಂದ ಆತ ಮುಕ್ತನಾಗುತ್ತಾನೆಯೇ ಎಂಬುದಕ್ಕೆ ಸಿನಿಮಾ ನೋಡಬೇಕು. ಲಂಗೋಟಿ ಮ್ಯಾನ್ ಹಾಸ್ಯದ ರಸದೌತಣ ಬಡಿಸುವುದರಲ್ಲಿ ಸಂಶಯವಿಲ್ಲ. ಮನರಂಜನೆಯನ್ನೇ ಪ್ರಧಾನವಾಗಿರಿಸಿಕೊಂಡಿರುವುದರಿಂದ ಲಾಜಿಕ್ ಬಗ್ಗೆ ಪ್ರಶ್ನೆ ಎತ್ತಲು ಅವಕಾಶವಿಲ್ಲ. ನಿರ್ದೇಶಕರು ಮತ್ತಷ್ಟು ಪ್ರಯತ್ನಿಸಿದ್ದರೇ ಸಿನಿಮಾವನ್ನು ಇನ್ನಷ್ಟು ಸೃಜನಶೀಲಾತ್ಮಕವಾಗಿ ತರಬಹುದಿತ್ತು.

ಈ ಹಿಂದೆ ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಂಜೋತ ಭಂಡಾರಿ ಅವರು ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಬಟ್ಟೆ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮೊಮ್ಮಗನ ಪಾತ್ರದಲ್ಲಿ ಆಕಾಶ್ ರಾಂಬೋ ಅವರ ಅಭಿನಯ ಚೆನ್ನಾಗಿದೆ. ಆಕಾಶ್ ಜೋಡಿಯಾಗಿ ಸ್ನೇಹ ಖುಷಿ ಗ್ಲ್ಯಾಮರ್ ಪಾತ್ರದಲ್ಲಿ ಮಿಂಚಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಸಂಹಿತಾ ವಿನ್ಯಾ, ನಾಯಕನ ತಾಯಿಯ ಪಾತ್ರಧಾರಿ ಸೇರಿದಂತೆ ಸಾಯಿ ಪವನ್ ಕುಮಾರ್, ಹುಲಿ ಕಾರ್ತಿಕ್, ಗಿಲ್ಲಿ ನಟ ಸಾಯಿ ಪವನ್ ಕುಮಾರ್ ತಮ್ಮ ತಮ್ಮ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ ಈ ಚಿತ್ರವನ್ನು ಒಮ್ಮೆ ನೋಡಬಹುದು.

ಸಿನಿಮಾ: ಲಂಗೋಟಿ ಮ್ಯಾನ್

ನಿರ್ದೇಶಕರು: ಸಂಜೋತಾ ಭಂಡಾರಿ

ಪಾತ್ರವರ್ಗ: ಆಕಾಶ್ ರಾಂಬೋ, ಸ್ನೇಹಾ ಖುಷಿ, ಸಮಿತಾ ವಿನಯ್, ಹುಲಿ ಕಾರ್ತಿಕ್, ಗಿಲ್ಲಿ ನಟ

Comments


Top Stories

bottom of page