top of page

'ಆರ' ಖ್ಯಾತಿಯ ರೋಹಿತ್ ಮುಂದಿನ ಚಿತ್ರ ಘೋಷಣೆ

  • Writer: Ananthamurthy m Hegde
    Ananthamurthy m Hegde
  • May 28
  • 1 min read
ree


2023ರಲ್ಲಿ‌ ತೆರೆಕಂಡ 'ಆರ' ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ, ನಿರ್ದೇಶಕ ರೋಹಿತ್ ಇದೀಗ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ತಮ್ಮ ಎರಡನೇ ಚಿತ್ರವನ್ನು ಘೋಷಿಸಿರುವ ರೋಹಿತ್, ಚಿತ್ರಕ್ಕೆ 'ಸಹ್ಯಾದ್ರಿ' ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಶೀರ್ಷಿಕೆಯ ಟೀಸರ್ ರಿಲೀಸ್ ಮೂಲಕ ಮಾಹಿತಿ ನೀಡಲಾಗಿದೆ. ಚಿತ್ರವು ಆಧ್ಯಾತ್ಮಿಕ ಥ್ರಿಲ್ಲರ್ ಎನ್ನಲಾಗಿದೆ.

'ಸಹ್ಯಾದ್ರಿ ಚಿತ್ರವು ಅಸಾಧಾರಣವಾಗಿ ಮೆದುಳಿನಲ್ಲಿ ಹೆಚ್ಚಿನ ಸಂಖ್ಯೆಯ ನರಕೋಶಗಳನ್ನು ಹೊಂದುತ್ತಾ ಅಕಾಲಿಕವಾಗಿ ಜನಿಸಿದ ಮಗುವಿನ ಕಥೆಯನ್ನು ಹೇಳುತ್ತದೆ. ಆ ಮಗು ಬೆಳೆದಂತೆ, ಅಪಾರ ಶಕ್ತಿಗಳನ್ನು ತಡೆದುಕೊಳ್ಳುವ ಮತ್ತು ನಿಯಂತ್ರಿಸುವ ಸಾಮರ್ಥ್ಯವಿರುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತದೆ. ಈ ನಿರೂಪಣೆಯೊಂದಿಗೆ ನಾನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ಆಧ್ಯಾತ್ಮಿಕ ಥ್ರಿಲ್ಲರ್ ಚಿತ್ರ ನಿರ್ಮಿಸುವ ಗುರಿಯನ್ನು ಹೊಂದಿದ್ದೇನೆ' ಎನ್ನುತ್ತಾರೆ ರೋಹಿತ್.

'ಇದು ಭಾರತೀಯ ಚಿತ್ರರಂಗದಲ್ಲಿ ಸಂಪೂರ್ಣವಾಗಿ ಅನ್ವೇಷಿಸದ ಆಧ್ಯಾತ್ಮಿಕತೆ ಮತ್ತು ಥ್ರಿಲ್ಲರ್ ಸಂಯೋಜನೆಯಾಗಿದೆ. ಚಿತ್ರವು ತೀವ್ರವಾದ ಮತ್ತು ಭಾವನಾತ್ಮಕವಾಗಿ ಬೇರೂರಿದ ಅಂಶವನ್ನು ಒಳಗೊಂಡಿದೆ' ಎಂದು ಅವರು ಹೇಳುತ್ತಾರೆ.

ಚಿತ್ರವನ್ನು ಮೊದಲಿಗೆ ಕನ್ನಡದಲ್ಲಿ ಚಿತ್ರೀಕರಿಸಲಾಗುವುದು. ನಂತರ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‌ಗೆ ಡಬ್ ಮಾಡುವ ಯೋಜನೆ ಇದೆ. ಪಶ್ಚಿಮ ಘಟ್ಟಗಳ ರಮಣೀಯ ಪ್ರದೇಶಗಳಲ್ಲಿ, ವಿಶೇಷವಾಗಿ ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಶೀಘ್ರದಲ್ಲೇ ನಿರ್ಮಾಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಚಿತ್ರತಂಡ 2026ರ ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ.


Comments


Top Stories

bottom of page