ಕಾಂತಾರ-2ನಲ್ಲಿ ಹಾಲಿವುಡ್ ತಂತ್ರಜ್ಞ : 2025ರಲ್ಲಿ ಬಿಡುಗಡೆ ಸಾಧ್ಯತೆ
- Ananthamurthy m Hegde
- Nov 3, 2024
- 1 min read

ರಿಷಬ್ ಶೆಟ್ಟಿ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತೆ 'ಕಾಂತಾರ'ವನ್ನು ಮೀರಿ ಪ್ರಿಕ್ವೆಲ್ ಮಾಡುವಲ್ಲಿ ನಿರತರಾಗಿದ್ದಾರೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಕೂಡ ಈ ಚಿತ್ರಕ್ಕೆ ಭಾರಿ ಬಜೆಟ್‌ನಲ್ಲಿ ಹಣ ಹೊಂದಿಸುತ್ತಿದೆ.
ಇದರ ಭಾಗವಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ಗುಣಮಟ್ಟದ ಕಲಾವಿದರು ಮತ್ತು ತಂತ್ರಜ್ಞರನ್ನು ಚಿತ್ರಕ್ಕೆ ತರುತ್ತಿದ್ದಾರೆ. ಈ ಹಿಂದೆ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸಕ್ಕಾಗಿ ಹಾಲಿವುಡ್‌ನ ಪ್ರಮುಖ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಇದೀಗ ರಿಷಬ್ ಹಾಲಿವುಡ್‌ನ ಪ್ರಮುಖ ಆಕ್ಷನ್ ಕೊರಿಯೋಗ್ರಾಫರ್‌ಗಳಲ್ಲಿ ಒಬ್ಬರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ನಲ್ಲಿ ವಿಶ್ವದರ್ಜೆಯ ತಂತ್ರಜ್ಞರಿದ್ದಾರೆ. ಇದೇ ಕಾರಣಕ್ಕೆ ರಾಜಮೌಳಿ ವಿಶ್ವವೇ ಮೆಚ್ಚುವ ಸಿನಿಮಾ ಕೊಟ್ಟಿದ್ದಾರೆ. ಇಡೀ ಸಿನಿಮಾ ಒಂದೆಡೆಯಾದರೆ, ಅದರಲ್ಲಿನ ಸಾಹಸ ದೃಶ್ಯಗಳು ಎಲ್ಲವನ್ನೂ ಮೀರಿಸುವಂತಿತ್ತು. ಇದೀಗ 'ಆರ್.ಆರ್.ಆರ್' ಚಿತ್ರದ ಆಕ್ಷನ್ ನಿರ್ದೇಶಕನನ್ನು 'ಕಾಂತಾರ'ದ ಪ್ರಿಕ್ವೆಲ್‌ಗೆ ಆಯ್ಕೆ ಮಾಡಲಾಗಿದೆ.
ಬಲ್ಗೇರಿಯಾದ ಟ್ಯೂಡರ್ ಲಜಾರೋವ್ ಅವರು 'ಆರ್‌ಆರ್‌ಆರ್' ಚಿತ್ರದಲ್ಲಿ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಎಸ್.ಎಸ್ ರಾಜಮೌಳಿ ಕೂಡ ಸಂದರ್ಶನವೊAದರಲ್ಲಿ ಅವರ ಬಗ್ಗೆ ಮಾತನಾಡಿದ್ದು, ಅವರ ಕೆಲಸವನ್ನು ಶ್ಲಾಘಿಸಿದ್ದರು. ಈಗ ಅದೇ ಟ್ಯೂಡರ್ ಲಾಜರೋವ್ 'ಕಾಂತಾರ'ಕ್ಕೆ ಕೆಲಸ ಮಾಡಲಿದ್ದಾರೆ.
ಟ್ಯೂಡರ್ ಲಾಜರೋವ್ ಚಿತ್ರತಂಡದ ಭಾಗವಾಗಲು ಬಲ್ಗೇರಿಯಾದಿಂದ ಕುಂದಾಪುರಕ್ಕೆ ಬಂದಿದ್ದಾರೆ. ರಿಷಬ್ ಶೆಟ್ಟಿ ಮತ್ತು ಟ್ಯೂಡರ್ ಲಾಜರೋವ್ ಕೂಡ ಒಟ್ಟಿಗೆ ಇರುವ ಫೋಟೋವನ್ನು ಹಂಚಿ ಕೊಂಡಿದ್ದಾರೆ. 'ಕಾಂತಾರ' ಪ್ರೀಕ್ವೆಲ್ ಚಲನಚಿತ್ರವು ಬಹಳಷ್ಟು ಪ್ರಮುಖ ಆಕ್ಷನ್ ಸೀಕ್ವೆನ್ಸ್ಗಳನ್ನು ಹೊಂದಿದ್ದು, ಇದನ್ನು ಟ್ಯೂಡರ್ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದೆ. 2025ರ ಮಧ್ಯಭಾಗದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಬಿಟ್ಟರೆ ಬೇರೆ ಯಾರು ನಟಿಸುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ರಿಷಬ್ ಶೂಟಿಂಗ್ ಮಾಹಿತಿಯನ್ನು ಗುಟ್ಟಾಗಿಟ್ಟಿದ್ದಾರೆ.
Comments