top of page

ಬಸ್ ನಿಲ್ದಾಣದ ದಾರಿ ಬಂದ್ ಮಾಡಿ ಗ್ರಾಮಸ್ಥರಿಂದ ಪ್ರತಿಭಟನೆ

  • Writer: Ananthamurthy m Hegde
    Ananthamurthy m Hegde
  • Aug 8
  • 1 min read
ree

ಮುಂಡಗೋಡ: ಮೂಲಸೌಕರ್ಯಗಳ ಕೊರತೆಯಿಂದ ನಲುಗಿರುವ ತಾಲ್ಲೂಕಿನ ಮಳಗಿ ಬಸ್ ನಿಲ್ದಾಣದ ಪ್ರವೇಶ ದ್ವಾರವನ್ನು ಸ್ಥಳೀಯರು ಗುರುವಾರ ಬಂದ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಹಲವು ವರ್ಷಗಳಿಂದ ಅಭಿವೃದ್ಧಿಗಾಗಿ ಕಾಯುತ್ತಿರುವ ಬಸ್ ನಿಲ್ದಾಣದ ಕುರಿತು, ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದಿದ್ದಾಗ ಪ್ರತಿಭಟನೆ ಅನಿವಾರ್ಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೇ ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದ್ದರೂ ನಿಲ್ದಾಣದೊಳಗೆ ಬಸ್‌ಗಳು ಬರದೇ ರಾಜ್ಯ ಹೆದ್ದಾರಿಯಲ್ಲಿಯೇ ನಿಂತು ಸಾಗುತ್ತಿವೆ. ಇದರಿಂದ, ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಹೋಗುವುದಿಲ್ಲ. ಒಂದೆರಡು ಗ್ರಾಮೀಣ ಭಾಗದ ಬಸ್ಸುಗಳು ಬರುವುದು ಬಿಟ್ಟರೇ, ಬಹುತೇಕ ನಿಲ್ದಾಣ ಬಿಕೋ ಎನ್ನುತ್ತಿದೆ. 'ನಿಲ್ದಾಣದ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಮನಸ್ಸು ಇಲ್ಲದಿದ್ದ ಮೇಲೆ, ನಿಲ್ದಾಣಕ್ಕೆ ಬೆರಳೆಣಿಕೆಯಷ್ಟು ಬಸ್‌ಗಳು ಬರುವುದು ಬೇಡ' ಎಂದು ಪ್ರತಿಭಟನಕಾರರು ಆಕ್ರೋಶದಿಂದ ಹೇಳಿದರು.

*30 ಗುಂಟೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ತಾಲ್ಲೂಕಿನ ಏಕೈಕ ಗ್ರಾಮೀಣ ಬಸ್ ನಿಲ್ದಾಣ ಇದಾಗಿದೆ. ನಿಲ್ದಾಣ ನಿರ್ಮಾಣಗೊಂಡು 15 ವರ್ಷ ಕಳೆದರೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಸಾರಿಗೆ ಇಲಾಖೆ ಹಾಗೂ ಸ್ಥಳಿಯ ಆಡಳಿತದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಮೂಲಸೌಕರ್ಯ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಸಲ ಮನವಿ ನೀಡಿದರೂ, ಉಪಯೋಗವಾಗಿಲ್ಲ' ಎಂದು ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗದಾನ ಮಾಡಿರುವ ಕೃಷ್ಣಮೂರ್ತಿ ಕಲ್ಕೂರ್ ಹೇಳಿದರು.

Comments


Top Stories

bottom of page