top of page

ಸಂಭಾವನೆಯಲ್ಲಿ ದಾಖಲೆ ಬರೆದ ನಟ ಯಶ್

  • Writer: Ananthamurthy m Hegde
    Ananthamurthy m Hegde
  • Dec 27, 2024
  • 1 min read

‘ಕೆಜಿಎಫ್ 2’ ಸಿನಿಮಾದ ಬಳಿಕ ಯಶ್ ರೇಂಜ್ ಬದಲಾಗಿದೆ. ಈಗ ಅವರು ಭಾರತದ ಟಾಪ್ ಪ್ಯಾನ್ ಇಂಡಿಯಾ ನಟರಲ್ಲಿ ಒಬ್ಬರು. ಯಶ್ ಇದೀಗ ಮತ್ತೊಂದು ಹೊಸ ದಾಖಲೆಗೆ ಕಾರಣರಾಗಿದ್ದಾರೆ. ಭಾರತದಲ್ಲಿ ಆ್ಯಂಟಿ ಹೀರೋ ಪಾತ್ರ ನಿರ್ವಹಿಸಲು ಅತಿ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಂದಹಾಗೆ ಯಾವ ಸಿನಿಮಾಕ್ಕೆ ಇವರು ದಾಖಲೆ ಮೊತ್ತದ ಸಂಭಾವನೆ ಪಡೆದಿದ್ದಾರೆ.

ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ಗಳಿಕೆ ಮಾಡುತ್ತಿವೆ. ಸ್ಟಾರ್ ನಟರ ಸಿನಿಮಾಗಳು ಚೆನ್ನಾಗಿಲ್ಲವೆಂದರು ಬಾಕ್ಸ್ ಆಫೀಸ್​ನಲ್ಲಿ 200-300 ಕೋಟಿ ಸುಲಭವಾಗಿ ಗಳಿಕೆ ಮಾಡುತ್ತಿವೆ. ಇದೇ ಕಾರಣಕ್ಕೆ ನಟರ ಸಂಭಾವನೆಯೂ ಹಲವು ಪಟ್ಟು ಹೆಚ್ಚಾಗಿದೆ. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾಕ್ಕೆ ಅಲ್ಲು ಅರ್ಜುನ್ 300 ಕೋಟಿಗೂ ಹೆಚ್ಚು ಹಣ ಸಂಭಾವನೆಯಾಗಿ ಪಡೆದಿದ್ದಾರಂತೆ. ಭಾರತದಲ್ಲಿ ಈವರೆಗೆ ಯಾವುದೇ ನಟ ಪಡೆದ ಸಂಭಾವನೆಯಲ್ಲಿ ಅತಿ ಹೆಚ್ಚು ಇದು. ಇದೀಗ ನಟ ಯಶ್ ಸಹ ಸಂಭಾವನೆ ಪಡೆವ ವಿಷಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟರ ಸಂಭಾವನೆ ಬಹಳ ಹೆಚ್ಚು. ಸ್ಟಾರ್ ನಟನೊಬ್ಬನಿಗೆ ನೂರು ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆಂದರೆ, ಇನ್ನುಳಿದ ಎಲ್ಲ ಪಾತ್ರವರ್ಗದವರ ಸಂಭಾವನೆಯ ಒಟ್ಟು ಮೊತ್ತ ನೂರು ಕೋಟಿ ಸಹ ಆಗುವುದಿಲ್ಲ. ಸಿನಿಮಾದ ನಾಯಕಿಗೆ ಅದೂ ಜನಪ್ರಿಯ ನಾಯಕಿ ಆಗಿದ್ದರೆ 5 ಕೋಟಿ ನೀಡಲಾಗುತ್ತದೆ. ಸಿನಿಮಾದ ವಿಲನ್​ ಪಾತ್ರಧಾರಿಗೆ ಎರಡು ಕೋಟಿ ನೀಡಿದರೆ ಹೆಚ್ಚು, ಬಾಬಿ ಡಿಯೋಲ್, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಅಂಥಹವರಿಗೆ ಬಹಳ ಹೆಚ್ಚೆಂದರೆ 10 ಕೋಟಿ ನೀಡಬಹುದು, ಆದರೆ ಯಶ್ ಈಗ ಆ್ಯಂಟಿ ಹೀರೋ ಅಥವಾ ವಿಲನ್ ಪಾತ್ರದಲ್ಲಿ ನಟಿಸಲು ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎನಿಸಿಕೊಂಡಿದ್ದಾರೆ.

ಭಾರತದ ಅತಿ ದೊಡ್ಡ ಸಿನಿಮಾ ಪ್ರಾಜೆಕ್ಟ್ ಆಗಿರುವ ರಾಮಾಯಣ ಕತೆ ಆಧರಿತ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ. ಯಶ್, ರಾವಣನ ಪಾತ್ರದಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದು, ರಾವಣನ ಪಾತ್ರದಲ್ಲಿ ನಟಿಸಲು ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆಯನ್ನು ಯಶ್ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ರಾವಣನ ಪಾತ್ರ ಆ್ಯಂಟಿ ಹೀರೋ ಪಾತ್ರವಾಗಿದ್ದು, ಆ್ಯಂಟಿ ಹೀರೋ ಪಾತ್ರ ನಿರ್ವಹಿಸಲು ನಟನೊಬ್ಬ ಇಷ್ಟು ದೊಡ್ಡ ಸಂಭಾವನೆ ಪಡೆದಿದ್ದು ಇದೇ ಮೊದಲು ಎನ್ನಲಾಗುತ್ತಿದೆ.

ಸಿನಿಮಾದಲ್ಲಿ ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತಾ ದೇವಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಜೆಟ್ 1000 ಕೋಟಿಗೂ ಹೆಚ್ಚಾಗಿದ್ದು, ಹಾಲಿವುಡ್​ನ ‘ಅವತಾರ್’ ಸಿನಿಮಾಕ್ಕೆ ಬಳಸಲಾಗಿರುವ ತಂತ್ರಜ್ಞಾನ ಬಳಸಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಹಲವು ಹಾಲಿವುಡ್ ಕಲಾವಿದರು ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆಸ್ಕರ್ ವಿಜೇತ ಹಾನ್ಸ್ ಜಿಮ್ಮರ್ ಈ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ಯಶ್ ಸಹ ನಿರ್ಮಾಪಕ ಸಹ ಆಗಿದ್ದಾರೆ. ಸಿನಿಮಾ ಅನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ.

Comments


Top Stories

bottom of page