top of page

ಹೋಗಿ ಬಾ ಮಗಳೇ ಎಂದ ಬಿಗ್ ಬಾಸ್ !

  • Writer: Ananthamurthy m Hegde
    Ananthamurthy m Hegde
  • Dec 30, 2024
  • 1 min read

'ಬಿಗ್ ಬಾಸ್‌' ಕನ್ನಡ ಸೀಸನ್ 11ರಲ್ಲಿ ಈ ವಾರದ ಎಲಿಮಿನೇಷನ್‌ ಕೊಂಚ ಎಮೋಷನಲ್‌ ಆಗಿತ್ತು. ಹೌದು, 13ನೇ ವಾರದ ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ ನಟಿ ಐಶ್ವರ್ಯಾ ಶಿಂಧೋಗಿ ಅವರು ಎಲಿಮಿನೇಟ್ ಆಗಿದ್ದಾರೆ. ಆದರೆ ಅವರಿಗೆ ಸಿಕ್ಕಿರುವ ಭಾವನಾತ್ಮಕ ವಿದಾಯ ಬಹಳ ವಿಶೇಷವಾಗಿತ್ತು. ಇದು ಈವರೆಗೂ ಯಾರಿಗೂ ಸಿಕ್ಕಿಲ್ಲ ಎನ್ನಬಹುದು. ಸ್ವತಃ ಬಿಗ್ ಬಾಸ್‌, "ಐಶ್ವರ್ಯಾ, ಹೋಗಿ ಬಾ ಮಗಳೇ.." ಎಂದು ಹೇಳಿದ್ದು ಇನ್ನೂ ವಿಶೇಷವಾಗಿತ್ತು.

ree

ಈ ವಾರ ಎಲಿಮಿನೇಟ್ ಆದ ಐಶ್ವರ್ಯಾಗೆ ವಿಶೇಷವಾಗಿ ವಿದಾಯ ಪತ್ರವನ್ನು ಬಿಗ್ ಬಾಸ್ ಬರೆದಿದ್ದರು. "ಪ್ರೀತಿಯ ಐಶ್ವರ್ಯಾ, 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಲ್ಲಿ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ,ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳಿಸಿಕೊಡಲೇಬೇಕಾಗಿದೆ. ತನ್ನವರು ಯಾರೂ ಇಲ್ಲ ಎಂಬ ಕೊರಗಿನೊಂದಿಗೆ ಈ ಮನೆಯನ್ನು ನೀವು ಪ್ರವೇಶ ಮಾಡಿದ್ರಿ. ಆದರೆ ಈಗ ಬಿಗ್ ಬಾಸ್ ಮನೆಯವರು, ಕರುನಾಡಿನ ಮನೆಮನೆಯವರ ಪ್ರೀತಿಯನ್ನು ಗಳಿಸಿದ್ದೀರಿ" ಎಂದು ಪತ್ರದಲ್ಲಿ ಬರೆಯಲಾಗಿತ್ತು.

"ಈ ಮನೆಯಲ್ಲಿ ನಿಮ್ಮ ಪಯಣ ಮುಗಿದಿರಬಹುದು. ಆದರೆ ನಮ್ಮ ನಿಮ್ಮ ನಂಟು ಎಂದಿಗೂ ಮುಗಿಯುವಂಥದ್ದಲ್ಲ. ಖಾಲಿ ಪತ್ರ ಪಡೆದೆ ಅಂದು, ಪದಗಳಿರುವ ಪತ್ರ ಪಡೆದೆ ಇಂದು ಹಾಗೂ ಎಂದೆಂದಿಗೂ ಈ ಮನೆಯ ಹಾಗೂ ಬಿಗ್ ಬಾಸ್ ಕುಟುಂಬದವರಾಗಿಯೇ ಇರುತ್ತೀರಿ. ಇದು ನಿಮಗೆ ಬಿಗ್ ಬಾಸ್ ನೀಡುತ್ತಿರುವ ಅಭಿಮಾನದ ವಿದಾಯ. ಹೋಗಿ ಬನ್ನಿ ಐಶ್ವರ್ಯಾ ನಿಮಗೆ ಶುಭವಾಗಲಿ" ಎಂದು ಬಿಗ್ ಬಾಸ್ ಪತ್ರದಲ್ಲಿ ಹೇಳಿದ್ದರು.

ಐಶ್ವರ್ಯಾ ಎಲಿಮಿನೇಷನ್‌ ವೇಳೆ ಮತ್ತೊಂದು ಭಾವನಾತ್ಮಕ ಕ್ಷಣಕ್ಕೆ ಮನೆ ಸಾಕ್ಷಿ ಆಯ್ತು. ಮುಖ್ಯದ್ವಾರದ ಬಳಿ ಅಳುತ್ತಾ ಹೋಗುತ್ತಿದ್ದ ಐಶೂಗೆ ಬಿಗ್ ಬಾಸ್ ಮತ್ತೊಂದು ಸಂದೇಶ ನೀಡಿದರು. "ಐಶ್ವರ್ಯಾ, ಜೀವನದ ಪಯಣದಲ್ಲಿ ಒಂದು ದ್ವಾರ ಮುಚ್ಚಿಕೊಂಡರೇ, ಮತ್ತೊಂದು ತೆರೆದುಕೊಳ್ಳುತ್ತದೆ. ಕೆಲವನ್ನು ದಾಟಿ, ಬದುಕನ್ನು ಕಟ್ಟಿಕೊಳ್ಳುತ್ತೇವೆ. ಇನ್ನೂ ಕೆಲವನ್ನು ದಾಟಿ, ಬದುಕು ಕಟ್ಟಿಕೊಳ್ಳುತ್ತೇವೆ" ಎಂದು 'ಬಿಗ್ ಬಾಸ್' ಹೇಳಿದರು.

"ಐಶ್ವರ್ಯಾ, ಈ ಮನೆಯಲ್ಲಿನ ನಿಮ್ಮ ಆಟ ಇಂದಿಗೆ ಮುಗಿದಿರಬಹುದು. ಆದರೆ ಮನೆಯ ದ್ವಾರ ತೆರೆದುಕೊಳ್ಳುವುದು ಆಟದಿಂದ ಹೊರಹಾಕಲ್ಪಟ್ಟ ಐಶ್ವರ್ಯಾಗೆ ಅಲ್ಲ, ತನ್ನ ತವರಿನಿಂದ ಹೊರಟು, ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಈ ಮನೆಯ ಮಗಳು ಐಶ್ವರ್ಯಾಗೆ, ಶುಭವಾಗಲಿ" ಎಂದು ಹೇಳಿ ಎಲ್ಲರನ್ನೂ ಭಾವುಕರನ್ನಾಗಿಸಿದರು 'ಬಿಗ್ ಬಾಸ್‌'. ಅಷ್ಟೇ ಅಲ್ಲ, "ಐಶ್ವರ್ಯಾ, ಹೋಗಿ ಬಾ ಮಗಳೇ" ಎಂದು ಬಿಗ್ ಬಾಸ್ ಹೇಳಿದ್ದು ಮತ್ತಷ್ಟು ವಿಶೇಷವಾಗಿತ್ತು. ಇದು ಮನೆಯ ಇತರೆ ಸದಸ್ಯರನ್ನು ಕೂಡ ಭಾವುಕರನ್ನಾಗಿಸಿತ್ತು.

Comments


Top Stories

bottom of page