top of page

ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದ ದುಷ್ಕರ್ಮಿಗಳು

Writer: Ananthamurthy m Hegde
Ananthamurthy m Hegde
Jan 20, 2025
1 min read

ಉತ್ತರ ಕನ್ನಡ: ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿಯೊಬ್ಬ ಹಸುಗಳ ಕೆಚ್ಚಲನ್ನು ಕತ್ತರಿಸಿ ಕ್ರೌರ್ಯತೆ ಮೆರೆದಿದ್ದ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಹಸುವಿನ ಬಾಲ ಗಾಯಗೊಳಿಸಿದ ಘಟನೆ ನಡೆದಿತ್ತು. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಗೋವುಗಳ ಮೇಲೆ ಮನುಷ್ಯರ ಕ್ರೌರ್ಯ ಹೆಚ್ಚುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದಂತೆ, ಇದೀಗ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಿನ ತಲೆ ಕಡಿದು ಹಾಕಿದ್ದಾರೆ. ಬಳಿಕ ಅದರ ದೇಹವನ್ನು ಕೊಂಡೊಯ್ದಿದ್ದಾರೆ. ಗೋಮಾಂಸ ಸೇವನೆಗಾಗಿ ಹಸುವನ್ನು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.

ಶನಿವಾರ (ಜ.18) ಮನೆಯಿಂದ ಮೇಯಲು ಹೋಗಿದ್ದ ಹಸು, ರಾತ್ರಿ ಕಳೆದರೂ ಹಿಂತಿರುಗಿರಲಿಲ್ಲ. ಹೀಗಾಗಿ ಹಸುವಿನ ಮಾಲೀಕ ಕೃಷ್ಣ ಆಚಾರಿ ಇಂದು (ಜ.19) ಬೆಳಗ್ಗಿನಿಂದಲೇ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಸುವಿನ ರಕ್ತ, ಕಾಲು ಹಾಗೂ ತಲೆ ಪತ್ತೆಯಾಗಿದೆ. ಗರ್ಭ ಧರಿಸಿದ್ದ ಹಸುವನ್ನು ಕಳೆದುಕೊಂಡು ಮಾಲೀಕ ಕೃಷ್ಣ ಆಚಾರಿ ಆಘಾತಗೊಂಡಿದ್ದಾರೆ.

ಪ್ರಕರಣ ದಾಖಲು, ತನಿಖೆ ಆರಂಭ!

ಘಟನೆಗೆ ಸಂಬಂಧಿಸಿ ಮೃತ ಹಸುವಿನ ಮಾಲೀಕ ಕೃಷ್ಣ ನಾರಾಯಣ ಆಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. '10 ವರ್ಷಗಳಿಂದ ನಾನು ಸಾಕಿದ್ದ ಕಪ್ಪು ಬಣ್ಣದ ಹಸುವನ್ನು ಶನಿವಾರ ಕಳವು ಮಾಡಿ ಹತ್ಯೆಗೈದಿದ್ದಾರೆ. ಬಳಿಕ ಕಾಲುಗಳು, ಕೋಡುಗಳು ಹಾಗೂ ಹಸುವಿನ ಗರ್ಭದಲ್ಲಿದ್ದ ಭ್ರೂಣಾವಸ್ಥೆಯ ಕರುವನ್ನು ಸ್ಥಳದಲ್ಲಿ ಬಿಟ್ಟು, ಮಾಂಸವನ್ನು ತೆಗೆದುಕೊಂಡು ಹೋಗಿದ್ದಾರೆ' ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments


Top Stories

1/322
bottom of page