ಸಿ . ಟಿ ರವಿ ಬಂಧನ ಖಂಡಿಸಿ ಕಾರ್ಯಕರ್ತರ ಪ್ರತಿಭಟನೆ
ಯಲ್ಲಾಪುರ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕರ್ನಾಟಕ ರಾಜ್ಯ ಇದ್ದಕ್ಕಿದ್ದ ಹಾಗೆ ತುರ್ತುಪರಿಸ್ಥಿತಿಯತ್ತ ಸಾಗಿದೆ. ಮಿಥ್ಯಾರೋಪ ಮಾಡಿ, ದೊಡ್ಡ ನಾಟಕವನ್ನು ರೂಪಿಸಿ ಸಿ.ಟಿ.ರವಿಯವರನ್ನು ಬಂಧಿಸಿದೆ. ರವಿ ಅವರು ಅವಾಚ್ಯ ಶಬ್ದ ಬಳಸಿದ್ದು ಸದನದಲ್ಲಿ ದಾಖಲೆಯಾಗಿಲ್ಲ. ಸಭಾಪತಿಗಳೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಜನರ ದಿಕ್ಕುತಪ್ಪಿಸಲು ಕಥೆ ಕಟ್ಟಲು ರಾಜ್ಯ ಸರ್ಕಾರ ಹೊರಟಿದೆ. ಇದೇ ಪ್ರವೃತ್ತಿ ಮುಂದುವರಿದರೆ ರಾಜ್ಯಾದ್ಯಂತ ಬೀದಿಗಿಳಿದು ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ನಮ್ಮ ಸಂಸದರ ಮೇಲೆ ಹಲ್ಲೆ ನಡೆಸುತ್ತಾರೆ. ನಮ್ಮ ವಿಧಾನಸೌಧದಲ್ಲಿ ಕಲಾಪ ನಡೆಯುವಾಗ ಗೂಂಡಾಗಳು ಒಳ ಪ್ರವೇಶಿಸುತ್ತಾರೆ. ಕಾನೂನನ್ನು ಗಾಳಿಗೆ ತೂರಿ ನಮ್ಮ ನಾಯಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಗೂಂಡಾಗಿರಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆದರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದರು.
ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಷಡ್ಯಂತ್ರ ಮಾಡುತ್ತ ಕಾಂಗ್ರೆಸ್ ಸರ್ಕಾರ ಮುಂದುವರಿದಿದೆ. ಪ್ರಖರ ಹಿಂದುತ್ವವಾದಿಯನ್ನು ಹೆದರಿಸಿದರೆ ಬಿಜೆಪಿ ಕಾರ್ಯಕರ್ತರು ಕುಗ್ಗುತ್ತಾರೆ ಎಂದು ಕಾಂಗ್ರೆಸ್ ತಿಳಿದಿದೆ. ನಮ್ಮ ಕಾರ್ಯಕರ್ತರು ಹಿಂಜರಿಯುವುದಿಲ್ಲ. ಮುಖ್ಯಮಂತ್ರಿಗಳು ಸಿ.ಟಿ ರವಿ ಅವರಲ್ಲಿ ಕ್ಷಮೆ ಕೇಳಬೇಕು. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಚಲವಾದಿ, ಶ್ರೀನಿವಾಸ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ, ಪ್ರಮುಖರಾದ ರೇಖಾ ಹೆಗಡೆ, ಪ್ರಸಾದ ಹೆಗಡೆ, ನಟರಾಜ ಗೌಡರ್, ರಾಘವೇಂದ್ರ ಭಟ್ಟ, ಚಂದ್ರಕಲಾ ಭಟ್ಟ, ಕಲ್ಪನಾ ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಕೆ.ಜಿ.ನಾಯ್ಕ, ರಾಜೇಂದ್ರ ನಾಯ್ಕ ಇತರರಿದ್ದರು.







Comments